ಹೈದರಾಬಾದ್: ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಇದೇ ದಿನದಂದು ಕೋಟ್ಯಂತರ ಭಾರತೀಯರು ಕಂಡಿದ್ದ ಕನಸು ನುಚ್ಚುನೂರಾಗಿತ್ತು. ಈ ದಿನ ಕ್ರೀಡಾಭಿಮಾನಿಗಳು ಊಹಿಸಲಾಗದ ಆಘಾತಕ್ಕೆ ಒಳಗಾಗಿದ್ದರು. ಕಳೆದ 11 ವರ್ಷಗಳಿಂದ ಕಂಡಿದ್ದ ಕನಸು ಈ ದಿನ ನನಸಾಗುತ್ತದೆ ಎಂದು ಕೊಂಡಿದ್ದವರ ಹೃದಯ ಒಡೆದಿತ್ತು.
ಹೌದು, ಕಳೆದು ವರ್ಷ ಇದೇ ದಿನ ಅಂದರೆ 19-11-2023 ರಂದು ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಪಂದ್ಯ ನಡೆದಿತ್ತು. ಈ ಬಾರಿ ಟೀಂ ಇಂಡಿಯಾ ಮೂರನೇ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಚಾಂಪಿಯನ್ ಆಗುತ್ತದೆ ಎಂದೇ ಭಾವಿಸಲಾಗಿತ್ತು. ಕಾರಣ ಭಾರತ ಆಡಿದ್ದ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಜೇಯವಾಗಿ ಫೈನಲ್ಗೆ ತಲುಪಿತ್ತು.
ಅದಾಗಲೇ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಸೋತಿದ್ದ ಆಸ್ಟ್ರೇಲಿಯಾ ಕೂಡ ಟೀಂ ಇಂಡಿಯಾವನ್ನು ಫೈನಲ್ ಪಂದ್ಯದಲ್ಲಿ ಮಣಿಸುವುದು ಸುಲಭದ ಮಾತಲ್ಲ ಎಂದು ಅರಿತುಕೊಂಡಿತ್ತು. ಆದರೂ ಭಾರತಕ್ಕೆ ಕಠಿಣ ಸ್ಪರ್ಧೆ ನೀಡಲು ಸಿದ್ಧತೆಯೊಂದಿಗೆ ಫೈನಲ್ ಪ್ರವೇಶ ಮಾಡಿತ್ತು. ಆದರೆ ಈ ಪಂದ್ಯದಲ್ಲಿ ಯಾರೂ ಊಹಿಸಲಾಗದಂತೆ ಭಾರತ ಸೋಲನುಭವಿಸಿ ವಿಶ್ವಕಪ್ ಕೈಚೆಲ್ಲಿತ್ತು.
ಭಾರತ ಸೋಲಲು ಪ್ರಮುಖ ಕಾರಣಗಳು
ಪಿಚ್ ಅರಿಯುವಲ್ಲಿ ವಿಫಲ: ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ನಿರ್ಣಾಯಕವಾಗಿತ್ತು. ಈ ಮೈದಾನದ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಹಕಾರಿಯಾಗಿರುವ ಕಾರಣ ಟಾಸ್ ಗೆದ್ದ ತಂಡಕ್ಕೆ ಪಂದ್ಯ ಗೆಲ್ಲುವ ಹೆಚ್ಚಿನ ಅವಕಾಶಗಳಿವೆ ಎಂದೇ ವರದಿಯಾಗಿದ್ದವು. ಅದರಂತೆ ಆಸ್ಟ್ರೇಲಿಯಾ ಟಾಸ್ ಗೆಲ್ಲುವುದರ ಜೊತೆಗೆ ಪಂದ್ಯವನ್ನು ಗೆದ್ದು ಬೀಗಿತ್ತು.
ನಿಧಾನಗತಿ ಬ್ಯಾಟಿಂಗ್: ಈ ಟೂರ್ನಿಯುದ್ದಕ್ಕೂ ಟೀಂ ಇಂಡಿಯಾ ಬ್ಯಾಟಿಂಗ್ನಿಂದ ಅಬ್ಬರಿಸಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು ಸೋಲಿಗೆ ಕಾರಣವಾಯಿತು. 81 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಭಾರತ ಒತ್ತಡಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾಗಿದ್ದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಜೋಡಿ 67 ರನ್ಗಳ ಜೊತೆಯಾಡವಾಡಿದ್ದರು. ಆದರೆ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದ ಇವರು ಜೊತೆಯಾಟಕ್ಕಾಗಿ 109 ಎಸೆತಗಳನ್ನು ಎದುರಿಸಿದ್ದರು. ಆರಂಭಿಕ 10 ಓವರ್ನಲ್ಲಿ 80 ರನ್ ಗಳಿಸಿದ್ದ ಟೀಂ ಇಂಡಿಯಾ ನಂತರ 40 ಓವರ್ಗಳಲ್ಲಿ 160 ರನ್ ಮಾತ್ರ ಕಲೆ ಹಾಕಿತ್ತು.
ಒತ್ತಡ ನಿಭಾಯಿಸುವಲ್ಲಿ ವಿಫಲ: ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಆಟಗಾರರು ಒತ್ತಡ ನಿಭಾಯಿಸುವಲ್ಲಿ ವಿಫಲರಾಗಿದ್ದು ಕೂಡ ಸೋಲಿಗೆ ಪ್ರಮುಖ ಕಾರಣವಾಗಿತ್ತು.
ಬೌಲಿಂಗ್ ವೈಫಲ್ಯ: ಈ ಪಂದ್ಯದಲ್ಲಿ ಆರಂಭದಲ್ಲಿ 4 ಓವರ್ಗೆ 41 ರನ್ ನೀಡಿ 3 ವಿಕೆಟ್ ಕಬಳಿಸಿದ್ದ ಭಾರತೀಯ ಬೌಲರ್ಗಳು ಬಳಿಕ ಅದೇ ರೀತಿಯ ಪ್ರದರ್ಶನ ಮುಂದುರೆಸಲಿಲ್ಲ. ವೇಗಿಗಳು ಲೈನ್ ಅಂಡ್ ಲೆಂಥ್ ಕಾಯ್ದುಕೊಳ್ಳುವಲ್ಲಿ ವಿಫಲರಾದರು.
ರೋಹಿತ್ ಶರ್ಮಾ ವಿಕೆಟ್: ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಆರಂಭ ನೀಡಿದ್ದರು. ಆದರೆ ಮ್ಯಾಕ್ಸ್ವೆಲ್ ಎಸೆದ 10ನೇ ಓವರ್ನಲ್ಲಿ ತಪ್ಪು ಹೊಡೆತದಿಂದ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಟ್ರಾವಿಸ್ ಹೆಡ್ ಅದ್ಭುತವಾದ ಕ್ಯಾಚ್ನೊಂದಿಗೆ ರೋಹಿತ್ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದರು.
ಸ್ಕೋರ್ ವಿವರ: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ 50 ಓವರ್ಗೆ 240 ರನ್ ಕಲೆ ಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಟ್ರಾವಿಸ್ ಹೆಡ್ ಬ್ಯಾಟಿಂಗ್ ನೆರವಿನಿಂದ ಇನ್ನೂ 7 ಓವರ್ಗಳು ಬಾಕಿ ಇರುವಂತೆಯೇ 6 ವಿಕೆಟ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಇದನ್ನೂ ಓದಿ: ಹೆಚ್ಚು ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದ ತಂಡ ಯಾವುದು?: ಇಲ್ಲಿದೆ ಹೆಡ್ ಟು ಹೆಡ್ ರೆಕಾರ್ಡ್ ಮಾಹಿತಿ