ಕೋಟ (ರಾಜಸ್ಥಾನ): ಪ್ರತಿಭೆ ವಯಸ್ಸಿನ ಮೇಲೆ ಅವಲಂಬಿತವಾಗಿಲ್ಲ ಎಂಬ ಮಾತಿದೆ. ಇದಕ್ಕೊಂದು ಉದಾಹರಣೆ ರಾಜಸ್ಥಾನದ 14ರ ಪ್ರಾಯದ ದೇವ್ ಪ್ರತಾಪ್ ಸಿಂಗ್ ಛಡ್ಡಾ. ಈತ ಹಳೆಯ ವಸ್ತುಗಳನ್ನೇ ಬಳಸಿಕೊಂಡು ತನ್ನಿಷ್ಟದ ವಿನ್ಯಾಸದಲ್ಲಿ ಬೈಕ್ ತಯಾರಿಸಿದ್ದಾನೆ. ದೇವ್ ಈಗ 8ನೇ ತರಗತಿಯ ವಿದ್ಯಾರ್ಥಿ. ಶಾಲಾ ವ್ಯಾಸಂಗದ ಜೊತೆಗೆ ಪ್ರತಿದಿನ 2 ಗಂಟೆಗಳಷ್ಟು ಬೈಕ್ ತಯಾರಿಸಲು ಮೀಸಲಿಡುತ್ತಿದ್ದನಂತೆ. ತನ್ನ ಮನೆಯಲ್ಲಿನ ಬಾಲ್ಕನಿಯನ್ನು ವರ್ಕ್ ಶಾಪ್ ಮಾಡಿಕೊಂಡಿದ್ದಾನೆ. 5 ತಿಂಗಳ ಶ್ರಮದ ಫಲಕ್ಕೆ ಸೂಪರ್ ಬೈಕ್ ತಯಾರಾಗಿದೆ.
ದೇವ್ ಪ್ರತಾಪ್ ಸಿಂಗ್ ಚಡ್ಡಾಗೆ ಬೈಕ್ ಎಂದರೆ ಪ್ರಾಣ. ಹೀಗಾಗಿ ಆತನೇ ಬೈಕ್ ತಯಾರಿಸುವ ಆಲೋಚನೆ ಮಾಡಿದ್ದಾನೆ. ಅದನ್ನು ಸಾಕಾರ ಮಾಡಲು ದೇವ್ ಹಳೆಯ ಬೈಕ್‌ಗಳು ಮತ್ತು ಜಂಕ್‌ಯಾರ್ಡ್‌ನಲ್ಲಿ ಬಿದ್ದಿದ್ದ ವಸ್ತುಗಳನ್ನು ಹೆಕ್ಕಿದ್ದಾನೆ. ನಂತರ, ನಿಧಾನವಾಗಿ ಹಳೆಯ ಎಂಜಿನ್ ಮತ್ತು ಇಂಧನ ಟ್ಯಾಂಕ್ ಅನ್ನು ಕ್ರೋಢೀಕರಿಸಿದ್ದಾನೆ. ಮಾರುಕಟ್ಟೆಯಿಂದ ಕೆಲವು ಸರಕುಗಳನ್ನು ಖರೀದಿಸಿದ್ದಾನೆ. ಬಳಿಕ ಒಂದೊಂದಾಗಿ ಜೋಡಿಸಿಕೊಂಡು ಬೈಕ್ ಅನ್ನೇ ರೂಪಿಸಿದ್ದಾನೆ.
ಮನೆಯ ಬಾಲ್ಕನಿಯೇ ವರ್ಕ್‌ಶಾಪ್: ವಿದ್ಯಾರ್ಥಿ ದೇವ್ ತಮ್ಮ ಮನೆಯ ಬಾಲ್ಕನಿಯನ್ನು ಮೆಕ್ಯಾನಿಕ್ ವರ್ಕ್‌ಶಾಪ್ ಆಗಿ ಮಾರ್ಪಡಿಸಿದ್ದಾನೆ. ಕಳೆದ 5-6 ತಿಂಗಳಿಂದ ಪ್ರತಿದಿನ 1 ರಿಂದ 2 ಗಂಟೆ ಇಲ್ಲಿ ಕೆಲಸ ಮಾಡುತ್ತಿದ್ದಾನೆ. ವೆಲ್ಡಿಂಗ್ನಿಂದ ಹಿಡಿದು ವೈರಿಂಗ್ವರೆಗೆ ಎಲ್ಲವನ್ನೂ ಆತನೇ ಮಾಡುತ್ತಿದ್ದಾನೆ. ಬೈಕ್ಗಾಗಿ ಆತ ಸದ್ಯ 17 ಸಾವಿರ ರೂಪಾಯಿ ಖರ್ಚು ಮಾಡಿದ್ದಾನೆ. ಹೆಚ್ಚಾಗಿ ಹಳೆಯ ವಸ್ತುಗಳನ್ನೇ ಬಳಸಿಕೊಂಡಿದ್ದಾನೆ. ಆತನ ಮನಸ್ಸಿನಲ್ಲಿ ಮೂಡಿದ ಮಾದರಿಯಲ್ಲೇ ಆತ ಬೈಕ್ ತಯಾರಿಸಿದ್ದಾನೆ.
ದೇವ್ ಪ್ರತಾಪ್ ಸಿಂಗ್ ಚಡ್ಡಾ ಶಾಲೆ ಮತ್ತು ಟ್ಯೂಷನ್ ನಂತರ ಉಳಿದ ಸಮಯದಲ್ಲಿ ತನ್ನ ಮಾರ್ಪಡಿಸಿದ ಬೈಕ್ ತಯಾರಿಸುತ್ತಾನೆ. ಸದ್ಯ ಬೈಕ್ ಓಡಿಸುವ ಹಂತಕ್ಕೆ ಬಂದು ತಲುಪಿದೆ. ಗೇರಿಂಗ್ ವ್ಯವಸ್ಥೆಯಿಂದ ಹಿಡಿದು ಬ್ರೇಕಿಂಗ್ವರೆಗೆ ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದೆ. ಹಳೆಯ ಎಂಜಿನ್ ಅನ್ನು ದುರಸ್ತಿ ಮಾಡಿ ಬೈಕ್ಗೆ ಅಳವಡಿಸಿದ್ದಾನೆ.
ಹಳೆಯ ಎಂಜಿನ್ ದುರಸ್ತಿ: ತನ್ನ ತಂದೆಯ ಗ್ಯಾರೇಜ್ನಿಂದ ಹಳೆಯ ವಸ್ತುಗಳನ್ನು ಸಂಗ್ರಹಿಸಿದ್ದಾನೆ. ಬೈಕ್ ರೂಪಿಸುವ ವೇಳೆ ಕೆಲ ತಾಂತ್ರಿಕ ಸಮಸ್ಯೆ ಉಂಟಾದಾಗ ಮೆಕ್ಯಾನಿಕ್ರ ಸಹಾಯ ಪಡೆದುಕೊಂಡಿದ್ದಾನೆ. ಗೇರ್ ಸಿಸ್ಟಂ, ಬ್ರೇಕ್, ವೈರಿಂಗ್, ಇಂಜಿನ್, ಬ್ಯಾಕ್ ಟೈರ್ ಕನೆಕ್ಟ್ಗೆ ಸ್ಕ್ರ್ಯಾಪ್ ಅನ್ನೇ ಬಳಸಿದ್ದಾನೆ. ಬೈಕ್‌ನ ಹಿಂಬದಿ ಟೈರ್‌ಗೆ ಅವರ ತಂದೆಯ ಕಾರಿನ ಹಳೆಯ ಚಕ್ರವನ್ನೇ ಬಳಸಿದ್ದಾನೆ. ಮುಂಭಾಗದ ಟೈರ್ ಸಿಗದಿದ್ದಾಗ, ಬುಲೆಟ್‌ನ ಹೊಸ ಟೈರ್ ಮತ್ತು ರಿಮ್ ಖರೀದಿಸಿದ್ದಾನೆ.
ಬೈಕ್ನಲ್ಲಿ ಹೆಡ್ ಲೈಟ್ ಸೇರಿದಂತೆ ಇನ್ನೂ ಕೆಲವು ಕೆಲಸ ಬಾಕಿ ಇದೆ. ಜತೆಗೆ ಪೆಟ್ರೋಲ್ ಟ್ಯಾಂಕ್ ಸಂಪರ್ಕ ಕಲ್ಪಿಸುವ ಕೆಲಸವೂ ಆಗಬೇಕಿದೆ. ಈ ಬೈಕ್ಗಾಗಿ ಆತ 5 ತಿಂಗಳಿನಿಂದ ಕೆಲಸ ಮಾಡುತ್ತಿದ್ದಾನೆ ಎಂಬುದು ವಿಶೇಷ.
ಇದನ್ನೂ ಓದಿ: 'ಶಿಂಧೆ- ಅಜಿತ್- ಚೌಹಾಣ್ ಪ್ರಧಾನಿಯ ಗುಲಾಮರು': ಮೋದಿಗೆ ತೆಲಂಗಾಣ ಸಿಎಂ 'ಗ್ಯಾರಂಟಿ' ಸವಾಲು