ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಎಸ್.ಕೆ.ಪಯೀನ್ ಪ್ರದೇಶದ ವುಲ್ಲರ್ ವ್ಯೂಪಾಯಿಂಟ್ ಬಳಿ ಯೋಧರನ್ನು ಕರೆದೊಯ್ಯುತ್ತಿದ್ದ ವಾಹನ ಸ್ಕಿಡ್ ಆಗಿ ರಸ್ತೆ ಮೇಲಿಂದ ಪ್ರಪಾತಕ್ಕೆ ಬಿದ್ದ ಪರಿಣಾಮ ಕನಿಷ್ಠ ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಓರ್ವ ಸೈನಿಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಗಾಯಗೊಂಡ ಸೈನಿಕರನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಂಡಿಪೋರಾ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮಸರತ್ ಇಕ್ಬಾಲ್ ವಾನಿ ಮಾತನಾಡಿ, "ಅಪಘಾತದ ಮಾಹಿತಿ ಸಿಕ್ಕ ತಕ್ಷಣ ನಾವು ನಮ್ಮ ಆಂಬ್ಯುಲೆನ್ಸ್ ಅನ್ನು ಕಳುಹಿಸಿದ್ದೆವು. ಗಾಯಗೊಂಡ ಸಿಬ್ಬಂದಿಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಗರ ಆಸ್ಪತ್ರೆಗೆ ರವಾನಿಸಲಾಯಿತು" ಎಂದು ಹೇಳಿದರು.
ಲೆಫ್ಟಿನೆಂಟ್ ಗವರ್ನರ್ ಸಂತಾಪ:ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪ್ರತಿಕ್ರಿಯಿಸಿ, "ಬಂಡಿಪೋರಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಭಾರತೀಯ ಸೇನಾ ಸಿಬ್ಬಂದಿಯ ಪ್ರಾಣಹಾನಿಯಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ಸೇವೆ ಮತ್ತು ಬದ್ಧತೆಗೆ ರಾಷ್ಟ್ರವು ಕೃತಜ್ಞವಾಗಿದೆ. ಮೃತರಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ತಿಳಿಸಿದ್ದಾರೆ.
ಮೃತರಿಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.
ಅಧಿಕಾರಿಗಳಿಂದ ತನಿಖೆ ಆರಂಭ:ಏತನ್ಮಧ್ಯೆ, ಅಪಘಾತದ ಕಾರಣವನ್ನು ಕಂಡು ಹಿಡಿಯಲು ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಕಾಶ್ಮೀರವು ದಟ್ಟವಾದ ಮಂಜಿನಿಂದ ಆವರಿಸಿದ್ದು, ಹಲವಾರು ಪ್ರಮುಖ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಹಿಮ ಸಂಗ್ರಹವಾಗಿದೆ, ಕೆಲವು ಮಾರ್ಗಗಳಲ್ಲಿ ವಾಹನಗಳು ಜಾರುತ್ತಿವೆ. ಇಂದು ರಾತ್ರಿಯಿಂದ ಕಣಿವೆಯಾದ್ಯಂತ ಹಿಮಪಾತವಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಇದನ್ನೂ ಓದಿ:ಉತ್ತರಾಖಂಡ್ದಿಂದ ಕಾಶ್ಮೀರದವರೆಗೆ ಸಂಚರಿಸಿದ ಹುಲಿರಾಯ; ಎರಡು ನದಿ ದಾಟಿ ಪ್ರಯಾಣ ಮಾಡಿ ಅಚ್ಚರಿ ಮೂಡಿಸಿದ ಟೈಗರ್