ಮುಂಬೈ: ಭಾರತದಲ್ಲಿ ವಿವಾಹ ಮುಹೂರ್ತಗಳ ಸೀಸನ್ ಆರಂಭವಾಗಲಿದ್ದು, ಈ ವರ್ಷದ ನವೆಂಬರ್ - ಡಿಸೆಂಬರ್ ಮಧ್ಯದ ಅವಧಿಯಲ್ಲಿ 35 ಲಕ್ಷಕ್ಕೂ ಹೆಚ್ಚು ಮದುವೆಗಳು ನಡೆಯಲಿವೆ ಹಾಗೂ ಈ ಮದುವೆಗಳಿಗಾಗಿ ಭಾರತೀಯರು ಒಟ್ಟು 4.25 ಲಕ್ಷ ಕೋಟಿ ರೂ. ಖರ್ಚು ಮಾಡಲಿದ್ದಾರೆ.
ಭಾರತದಲ್ಲಿ ಪ್ರತಿವರ್ಷ ಸರಿಸುಮಾರು 1 ಕೋಟಿ ವಿವಾಹಗಳು ನೆರವೇರುತ್ತವೆ. ಈ ಮೂಲಕ ಭಾರತದ ವಿವಾಹ ಉದ್ಯಮವು ಜಗತ್ತಿನಲ್ಲೇ ಎರಡನೇ ಅತಿದೊಡ್ಡ ವಿವಾಹ ಉದ್ಯಮವಾಗಿದೆ. ವರದಿಗಳ ಪ್ರಕಾರ, ಈ ವಲಯವು ಭಾರತದ ನಾಲ್ಕನೇ ಅತಿದೊಡ್ಡ ಉದ್ಯಮವಾಗಿದ್ದು, ವಾರ್ಷಿಕವಾಗಿ ಈ ಉದ್ಯಮ ವಲಯದಲ್ಲಿ $ 130 ಬಿಲಿಯನ್ ಖರ್ಚು ಮಾಡಲಾಗುತ್ತದೆ ಮತ್ತು ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತವೆ.
2024ರಲ್ಲಿ ನಡೆದಿವೆ ಇಷ್ಟೊಂದು ಮದುವೆಗಳು:2024 ರಲ್ಲಿ, ಜನವರಿ 15 ರಿಂದ ಜುಲೈ 15 ರವರೆಗೆ, ಭಾರತದಲ್ಲಿ 4.2 ದಶಲಕ್ಷಕ್ಕೂ ಹೆಚ್ಚು ವಿವಾಹಗಳು ನಡೆದಿವೆ. ಇದಕ್ಕಾಗಿ ಅಂದಾಜು 66.4 ಬಿಲಿಯನ್ ಡಾಲರ್ (5.5 ಲಕ್ಷ ಕೋಟಿ ರೂ.) ಖರ್ಚು ಮಾಡಲಾಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಸಮೀಕ್ಷೆ ತಿಳಿಸಿದೆ. ಭಾರತದಲ್ಲಿ ವಿವಾಹ ಮತ್ತು ಚಿನ್ನದ ಖರೀದಿ ಎರಡೂ ವಿಷಯಗಳು ಒಂದಕ್ಕೊಂದು ನಿಕಟವಾಗಿ ಬೆಸೆದುಕೊಂಡಿವೆ. ವಿವಾಹ ಸಂದರ್ಭದಲ್ಲಿ ಭಾರತೀಯರು ಚಿನ್ನದ ಖರೀದಿ ಮಾಡುವುದು ಹೆಚ್ಚು.
"ಇತ್ತೀಚೆಗೆ ಚಿನ್ನದ ಆಮದು ಸುಂಕವನ್ನು ಶೇಕಡಾ 15 ರಿಂದ 6 ಕ್ಕೆ ಇಳಿಸಿರುವುದರಿಂದ ದೇಶದಲ್ಲಿ ಈ ಬಾರಿ ಚಿನ್ನದ ಖರೀದಿ ಪ್ರಮಾಣ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ" ಎಂದು ಪ್ರಭುದಾಸ್ ಲೀಲಾಧರ್ನ ಇತ್ತೀಚಿನ ವರದಿಯಲ್ಲಿ ಹೇಳಲಾಗಿದೆ. ಚಿನ್ನದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆ, ಮೌಲ್ಯಯುತ ಹೂಡಿಕೆಯಾಗಿ ಅದರ ಸ್ಥಾನಮಾನವನ್ನು ಗಮನಿಸಿದರೆ, ಆಮದು ಸುಂಕ ಕಡಿತದಿಂದ ಬೇಡಿಕೆಯು ಗಮನಾರ್ಹವಾಗಿ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.