ಬರೇಲಿ (ಉತ್ತರ ಪ್ರದೇಶ): ಗೂಗಲ್ ಮ್ಯಾಪ್ ನೋಡಿ ಪ್ರಯಾಣಿಸುವಾಗ ರಾತ್ರಿ ವೇಳೆ ಕಾರೊಂದು ನಿರ್ಮಾಣ ಹಂತದ ಸೇತುವೆಯಿಂದ ರಾಮಗಂಗಾ ನದಿಯ ಮರಳಿಗೆ ಬಿದ್ದು, ಕಾರಿನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಿಲ್ಲೆಯ ಫರೀದ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಭೀಕರ ಅಪಘಾತ ಸಂಭವಿಸಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಫರೂಕಾಬಾದ್‌ನ ಮೂವರು ಯುವಕರು ಶನಿವಾರ ರಾತ್ರಿ ಬದೌನ್‌ನ ದತಗಂಜ್‌ನಿಂದ ಫರೀದ್‌ಪುರ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಬರೇಲಿಯ ಫರೀದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖಾಲ್‌ಪುರದ ರಾಮಗಂಗಾ ನದಿಯ ನಿರ್ಮಾಣ ಹಂತದ ಸೇತುವೆಯಿಂದ ರಾಮಗಂಗಾ ನದಿಗೆ ಬಿದ್ದಿದೆ. ಕಾರು ಬಹಳ ಎತ್ತರದಿಂದ ಬಿದ್ದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗೂಗಲ್ ಮ್ಯಾಪ್ ಅನುಸರಿಸಿ ಬಂದು ಅವಘಡ : ಗೂಗಲ್ ಮ್ಯಾಪ್ನಲ್ಲಿ ಮಾರ್ಗ ನೋಡಿಕೊಂಡು ಮೂವರು ಸ್ನೇಹಿತರು ಗುರ್ಗಾಂವ್ನಿಂದ ಬರುತ್ತಿದ್ದರು ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.
ಗೂಗಲ್ ನಕ್ಷೆಗಳಲ್ಲಿ, ನಿರ್ಮಾಣ ಹಂತದಲ್ಲಿರುವ ಸೇತುವೆಯ ಮಾರ್ಗವನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಆದರೆ, ಸೇತುವೆಯ ಒಂದು ಬದಿಯಲ್ಲಿ ಮಾರ್ಗವನ್ನು ನಿರ್ಮಿಸಲಾಗಿಲ್ಲ. ಹೀಗಾಗಿ ಅಲ್ಲಿಂದ ಕಾರು ಸುಮಾರು 50 ಅಡಿ ಕೆಳಗೆ ಬಿದ್ದಿರುವುದರಿಂದ ಮೂವರೂ ಸಾವನ್ನಪ್ಪಿದ್ದಾರೆ. ಆಡಳಿತ ಮತ್ತು ಪಿಡಬ್ಲ್ಯುಡಿ ಇಲಾಖೆಯವರು ಸೇತುವೆಯ ಮಾರ್ಗವನ್ನು ಬಂದ್ ಮಾಡಿದ್ದರೆ ಬಹುಶಃ ಈ ಅವಘಡ ಸಂಭವಿಸುತ್ತಿರಲಿಲ್ಲ ಎಂದು ಮೃತರ ಕುಟುಂಬಸ್ಥರು ಹೇಳಿದ್ದಾರೆ.