ನವಿ ಮುಂಬೈ (ಮಹಾರಾಷ್ಟ್ರ): ಮುಂಬೈನ ಜಾವ್ಲೆ ಎಂಬ ಗ್ರಾಮದಲ್ಲಿನ ಕಿರಾಣಿ ಅಂಗಡಿಯೊಂದರಲ್ಲಿ 5 ಕೆಜಿಯ ಎರಡು ಎಲ್‌ಪಿಜಿ ಸಿಲಿಂಡರ್‌ಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡ ಪರಿಣಾಮ ತಾಯಿ ಮತ್ತು ಆಕೆಯ ಇಬ್ಬರು ಮಕ್ಕಳು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಬುಧವಾರ ಸಂಜೆ ಈ ಘಟನೆ ಸಂಭವಿಸಿದ್ದು, ದೀಪಾವಳಿ ಹಬ್ಬದ ಖುಷಿಯನ್ನು ಕಸಿದುಕೊಂಡಿದೆ. ತೀವ್ರ ಸುಟ್ಟಗಾಯಗಳಿಂದ ಓರ್ವ ವ್ಯಕ್ತಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ಅಂಗಡಿಯಲ್ಲಿ 5 ಕೆಜಿ ತೂಕದ ಎರಡು ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆ ಭೀಕರವಾಗಿತ್ತು. ಘಟನೆಯಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. 38 ವರ್ಷದ ತಾಯಿ, 15 ವರ್ಷದ ಮಗಳು ಮತ್ತು 8 ವರ್ಷದ ಮಗ ಇದ್ದಾರೆ. ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಈ ಅಂಗಡಿಯಲ್ಲಿ ಸಣ್ಣ ಸಿಲಿಂಡರ್‌ಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಅಲ್ಲದೇ ರಹಸ್ಯವಾಗಿ ಪೆಟ್ರೋಲ್ ಕೂಡ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ಇದೆ. ಮುಂಜಾಗ್ರತಾ ಕ್ರಮವಾಗಿ ಸುತ್ತಮುತ್ತಲಿನ ಮನೆಗಳನ್ನು ತೆರವು ಮಾಡಲಾಗಿತ್ತು. ಸಿಲಿಂಡರ್ ಸ್ಫೋಟಕ್ಕೆ ಸದ್ಯಕ್ಕೆ ಕಾರಣ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಶಸ್ತ್ರಾಸ್ತ್ರ ತಯಾರಿಕಾ ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟ ; 13 ಮಂದಿಗೆ ಗಂಭೀರ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ