ಮುಂಬೈ (ಮಹಾರಾಷ್ಟ್ರ): ದಕ್ಷಿಣ ಕೊರಿಯಾದ ಪ್ರಖ್ಯಾತ ಬಿಟಿಎಸ್ ಪಾಪ್ ತಾರೆಯರನ್ನು ಭೇಟಿಯಾಗುವ ಉದ್ದೇಶದಿಂದ ಪ್ರಯಾಣಕ್ಕಾಗಿ ಮೂವರು ಬಾಲಕಿಯರು ಸ್ವಯಂ ಅಪಹರಣದ ನಾಟಕವಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ. 11 ವರ್ಷ ಹಾಗೂ 13 ವರ್ಷದ ಇಬ್ಬರು ಸೇರಿ ಒಟ್ಟು ಮೂವರು ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಪೋಷಕರಿಗೆ ಒಪ್ಪಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದಕ್ಷಿಣ ಕೊರಿಯಾದ ಕೆ-ಪಾಪ್ ಬ್ಯಾಂಡ್ ತಾರೆಯರೆಂದರೆ ತಮಗೆ ಬಲು ಇಷ್ಟ, ಇದೇ ಕಾರಣಕ್ಕೆ ನಾವು ದಕ್ಷಿಣ ಕೊರಿಯಾಗೆ ತೆರಳಲು ಯೋಜಿಸಿದ್ದೆವು. ಇದಕ್ಕಾಗಿ ಪುಣೆಗೆ ಹೋಗಿ ಅಲ್ಲಿ ಹಣ ಹೊಂದಿಸಲು ನಿರ್ಧರಿಸಿದ್ದೆವು ಎಂದು ಧರಶಿವ ಜಿಲ್ಲೆಯ ಬಾಲಕಿಯರು ತಿಳಿಸಿದ್ದಾರೆ. ಸದ್ಯ ಇದೀಗ ಪೊಲೀಸರ ವಶದಲ್ಲಿರುವ ಇವರನ್ನು ಪೋಷಕರಿಗೆ ಒಪ್ಪಿಸಲಾಗಿದೆ.
ಪ್ರಕರಣ ಹಿನ್ನೆಲೆ: ಡಿಸೆಂಬರ್ 27ರಂದು ಧರಶಿವ ಪೊಲೀಸರ ಸಹಾಯವಾಣಿಗೆ ಕರೆಯೊಂದು ಬಂದಿತ್ತು. ಈ ಕರೆಯಲ್ಲಿ ಮಾತನಾಡಿದ ಮೂವರು ಬಾಲಕಿಯರು ಒಮೆರ್ಗಾ ತಾಲೂಕಿನಿಂದ ಶಾಲಾ ವಾಹನದಲ್ಲಿ ತಮ್ಮನ್ನು ಬಲವಂತವಾಗಿ ಕಿಡ್ನಾಪ್ ಮಾಡಲಾಗಿದೆ ಎಂದು ಹೇಳಿದ್ದರು.