ಮುಂಬೈ (ಮಹಾರಾಷ್ಟ್ರ):ಥಾಯ್ಲೆಂಡ್‌ನಲ್ಲಿ 25ಕ್ಕೂ ಹೆಚ್ಚು ಭಾರತೀಯರನ್ನು ಹೆಚ್ಚಿನ ಸಂಬಳದ ಆಮಿಷವೊಡ್ಡಿ, ಉದ್ಯೋಗಕ್ಕೆ ಸೇರಿಸಿಕೊಂಡ ಬಳಿಕ ಅವರಿಂದ ಸೈಬರ್ ಅಪರಾಧಗಳನ್ನು ಮಾಡಿಸಿದ ಜಾಲ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಇಬ್ಬರು ಏಜೆಂಟರುಗಳನ್ನು ಬಂಧಿಸಲಾಗಿದೆ.
ಭಾರತೀಯ ಯುವಕರಿಗೆ ಹೆಚ್ಚಿನ ಸಂಬಳ ನೀಡುವ ಆಸೆ ತೋರಿಸಿ ಲಾವೋಸ್ಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರನ್ನು ವಂಚನೆಯಲ್ಲಿ ಬಳಸಿಕೊಂಡು, ಕಾಲ್ ಸೆಂಟರ್ ಮೂಲಕ ಜನರಿಗೆ ಕರೆ ಮಾಡಿಸಿ ಹಣ ಪೀಕಲು ಆದೇಶಿಸಿದ್ದಾರೆ.
ವಂಚನೆ ಜಾಲದಿಂದ ತಪ್ಪಿಸಿಕೊಂಡು ಬಂದ ಸಿದ್ಧಾರ್ಥ್ ಯಾದವ್ (23) ಎಂಬಾತ ನೀಡಿದ ದೂರಿನ ಮೇರೆಗೆ ದಂಧೆಯ ಕಿಂಗ್‌ಪಿನ್ ಎಂದು ಗುರುತಿಸಲಾದ ಏಜೆಂಟ್ ಜೆರ್ರಿ ಜಾಕೋಬ್ (46) ಮತ್ತು ಆತನ ಸಹಚರ ಗಾಡ್‌ಫ್ರೇ ಅಲ್ವಾರೆಸ್ (39) ಎಂಬಾತನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಪ್ರಕರಣದಲ್ಲಿ ಸನ್ನಿ ಎಂಬ ಇನ್ನೊಬ್ಬ ಏಜೆಂಟ್ ಹೆಸರೂ ಇದ್ದು, ಆತನಿಗಾಗಿ ತಲಾಶ್ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:ಮಹಾರಾಷ್ಟ್ರದ ಥಾಣೆ ನಿವಾಸಿ ಸಿದ್ದಾರ್ಥ್ ಯಾದವ್ ಮತ್ತು ಇತರ ಮೂವರು ಉದ್ಯೋಗ ವಂಚನೆ ಜಾಲದಲ್ಲಿ ಸಿಲುಕಿಕೊಂಡಿದ್ದರು. 2022 ರಲ್ಲಿ ಅವರು ಲಾವೋಸ್ಗೆ ತೆರಳಿದ್ದರು. ಅಲ್ಲಿ ತಮ್ಮಿಂದ ಅಪರಾಧ ಕೃತ್ಯಗಳನ್ನು ಮಾಡಿಸುತ್ತಿದ್ದ ಜಾಲದಿಂದ ಬೇಸತ್ತು ಮೂವರು ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯ ನೆರವು ಯಾಚಿಸಿದ್ದಾರೆ.