ಇಂಫಾಲ್ (ಮಣಿಪುರ): 2023 ರಲ್ಲಿ ರಾಜ್ಯ ಸಚಿವ ಸಂಪುಟದ ಉಪ ಸಮಿತಿಯು 2,480 ಅಕ್ರಮ ವಲಸಿಗರನ್ನು ಪತ್ತೆ ಮಾಡಿದೆ. ಆದರೆ ಕಳೆದ ವರ್ಷ ಮೇ 3 ರಂದು ಹಿಂಸಾಚಾರ ಭುಗಿಲೆದ್ದ ನಂತರ ಈ ಅಭಿಯಾನವನ್ನು ನಿಲ್ಲಿಸಲಾಯಿತು ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಭಾನುವಾರ ಹೇಳಿದ್ದಾರೆ.
ಇಂದು ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್, ಹೆಚ್ಚುತ್ತಿರುವ ಅರಣ್ಯನಾಶ ಮತ್ತು ಅಕ್ರಮ ವಲಸಿಗರಿಂದ ಹೊಸ ಗ್ರಾಮಗಳನ್ನು ಸ್ಥಾಪಿಸುವ ಬಗ್ಗೆ ಕಾಳಜಿವಹಿಸಿ, ಫೆಬ್ರವರಿ 2023 ರಲ್ಲಿ ಇಬ್ಬರು ಕುಕಿ ಮಂತ್ರಿಗಳಾದ ಲೆಟ್ಪಾವೊ ಹಾಕಿಪ್ ಮತ್ತು ನೆಮ್ಚಾ ಕಿಪ್ಜೆನ್ ಅವರು ಭಾಗವಹಿಸಿದ ಕ್ಯಾಬಿನೆಟ್ ಸಭೆಯ ನಂತರ ಕ್ಯಾಬಿನೆಟ್ ಉಪಸಮಿತಿಯನ್ನು ರಚಿಸಲಾಯಿತು. ಅಕ್ರಮ ವಲಸಿಗರನ್ನು ಗುರುತಿಸುವ ಉಪ ಸಮಿತಿಯ ಮುಖ್ಯಸ್ಥರನ್ನಾಗಿ ಹಾಕಿಪ್ ಅವರನ್ನು ನೇಮಿಸಲಾಯಿತು ಎಂದು ತಿಳಿಸಿದರು.
"ನಾವು ಯಾರ ವಿರುದ್ಧವೂ ಪಕ್ಷಪಾತ ಹೊಂದಿಲ್ಲ. ಆದರೆ ಅಕ್ರಮ ವಲಸಿಗರ ವಿರುದ್ಧ ಇದು ರಾಜ್ಯ ಕ್ಯಾಬಿನೆಟ್ ತೆಗೆದುಕೊಂಡ ನಿರ್ಧಾರ. ಬಯೋಮೆಟ್ರಿಕ್ಸ್ ಅನ್ನು ಚಾಂಡೆಲ್‌ನ ಹತ್ತು ಹಳ್ಳಿಗಳಲ್ಲಿ ತೆಗೆದುಕೊಳ್ಳಲಾಗಿದೆ. ಈ ಸಮಯದಲ್ಲಿ 1,165 ಅಕ್ರಮ ವಲಸಿಗರು ಕಂಡುಬಂದಿದ್ದಾರೆ. 1,147 ಅಕ್ರಮ ವಲಸಿಗರು ತೆಂಗ್ನೌಪಾಲ್ ಜಿಲ್ಲೆಯ 13 ಹಳ್ಳಿಗಳಲ್ಲಿ ಪತ್ತೆಯಾಗಿದ್ರೆ, 154 ಅಕ್ರಮ ವಲಸಿಗರು ಚುರಾಚಂದ್‌ಪುರದಲ್ಲಿ ಮತ್ತು ಉಳಿದವರು ಕಾಮ್‌ಜಾಂಗ್ ಜಿಲ್ಲೆಯಲ್ಲಿ ಕಂಡುಬಂದಿದ್ದಾರೆ" ಎಂದು ಸಿಎಂ ಸಿಂಗ್ ಹೇಳಿದರು.
ಕಾಮ್‌ಜಾಂಗ್ ಜಿಲ್ಲೆಗೆ ಪ್ರವೇಶಿಸಿದ ಹೆಚ್ಚುವರಿ 5,457 ಅಕ್ರಮ ವಲಸಿಗರನ್ನು ಈ ಅಂಕಿಅಂಶಗಳು ಒಳಗೊಂಡಿಲ್ಲ. ನೆರೆಯ ದೇಶದಲ್ಲಿ ಪರಿಸ್ಥಿತಿ ಸುಧಾರಿಸಿದ ನಂತರ 329 ಜನರು ಸ್ವಯಂಪ್ರೇರಣೆಯಿಂದ ಹಿಂತಿರುಗಿದ್ದಾರೆ ಮತ್ತು 5,173 ಜನರ ಬಯೋಮೆಟ್ರಿಕ್‌ಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಿಂಗ್ ಹೇಳಿದರು.