ಮುಂಬೈ/ನವದೆಹಲಿ:ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಮುಂದುವರಿದಿವೆ. ಭಾನುವಾರ ಮತ್ತೆ 24 ವಿಮಾನಗಳಿಗೆ ಬೆದರಿಕೆ ಬಂದಿವೆ. ಇದರಿಂದ, ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ಹಲವಾರು ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿದೆ. ಇದಕ್ಕೆ ಏರ್ಲೈನ್ಸ್ಗಳು ವಿಷಾದ ವ್ಯಕ್ತಪಡಿಸಿವೆ.
ಇಂಡಿಗೋ, ವಿಸ್ತಾರ, ಆಕಾಶ್ ಏರ್, ಏರ್ ಇಂಡಿಯಾ ಏರ್ಲೈನ್ಸ್ಗಳ ಅಂತಾರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಅದರಲ್ಲಿ ಇಂಡಿಗೋ, ವಿಸ್ತಾರ ಮತ್ತು ಏರ್ ಇಂಡಿಯಾದ ತಲಾ ಆರು ವಿಮಾನಗಳಿಗೆ ಬೆದರಿಕೆ ಬಂದಿದೆ. ಇಲ್ಲಿಯವರೆಗೆ, 90ಕ್ಕೂ ಹೆಚ್ಚು ವಿಮಾನಗಳಿಗೆ ಇಂಥಹದ್ದೇ ಸಂದೇಶಗಳು ಬಂದಿವೆ. ಅವುಗಳಲ್ಲಿ ಹೆಚ್ಚಿನವು ಹುಸಿಯಾಗಿವೆ.
ಯಾವೆಲ್ಲಾ ವಿಮಾನಗಳಿಗೆ ಬೆದರಿಕೆ:ಈ ಬಗ್ಗೆ ಇಂಡಿಗೋ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದ್ದು, ಜೆಡ್ಡಾದಿಂದ ಮುಂಬೈಗೆ ಸಂಪರ್ಕ ಕಲ್ಪಿಸುವ 6E 58, 6E87 (ಕೋಝಿಕೋಡ್‌ನಿಂದ ದಮ್ಮಾಮ್), 6E11 (ದೆಹಲಿಯಿಂದ ಇಸ್ತಾನ್‌ಬುಲ್), 6E17 (ಮುಂಬೈನಿಂದ ಇಸ್ತಾನ್‌ಬುಲ್), 6E133 (ಪುಣೆಯಿಂದ ಜೋಧ್ಪುರ), 6E112 (ಗೋವಾದಿಂದ ಅಹಮದಾಬಾದ್)ಗೆ ಸಂಪರ್ಕಿಸುವ ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿತ್ತು.
ಇನ್ನು, ವಿಸ್ತಾರ ಸಂಸ್ಥೆಯ ಹೇಳಿಕೆಯಂತೆ, UK25 (ದೆಹಲಿಯಿಂದ ಫ್ರಾಂಕ್‌ಫರ್ಟ್), UK106 (ಸಿಂಗಪುರದಿಂದ ಮುಂಬೈ), UK146 (ಬಾಲಿಯಿಂದ ದೆಹಲಿ), UK116 (ಸಿಂಗಪುರದಿಂದ ದೆಹಲಿ), UK110 (ಸಿಂಗಪುರದಿಂದ ಪುಣೆ) ಮತ್ತು UK107 (ಮುಂಬೈನಿಂದ ಸಿಂಗಾಪುರ) ಸೇರಿ ಆರು ವಿಮಾನಗಳಿಗೆ ಬೆದರಿಕೆ ಬಂದಿವೆ ಎಂದಿದೆ.