ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಮದುವೆಯ ಪ್ರಸ್ತಾಪ ತಿರಸ್ಕರಿಸಿದ ಕಾರಣಕ್ಕೆ ಆ್ಯಸಿಡ್ ದಾಳಿ ಮಾಡಿದ್ದ ಅಪರಾಧಿಗೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 40 ಲಕ್ಷ ರೂಪಾಯಿಗಳ ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ. ಅಲ್ಲದೇ, ಈ ದಾಳಿಯನ್ನು ಕ್ರೂರ ಮತ್ತು ಅಮಾನವೀಯ ಕೃತ್ಯ ಎಂದು ಕೋರ್ಟ್ ಹೇಳಿದೆ.
2022ರ ಫೆಬ್ರವರಿ 1ರಂದು 24 ವರ್ಷದ ಯುವತಿ ಮೇಲೆ ಆ್ಯಸಿಡ್ ದಾಳಿ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಶ್ರೀನಗರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜವಾದ್ ಅಹ್ಮದ್, ಇದೇ ಮಾರ್ಚ್ 4ರಂದು ಪ್ರಮುಖ ಆರೋಪಿ ಸಾಜಿದ್ ಅಲ್ತಾಫ್ ಶೇಖ್ ಎಂಬಾತನನ್ನು ದೋಷಿ ಎಂದು ಘೋಷಿಸಿದ್ದರು. ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿರುವ ನ್ಯಾಯಾಧೀಶರು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಮತ್ತು 326-ಎ ಅಡಿ (ಆ್ಯಸಿಡ್ ಬಳಕೆ ಮೂಲಕ ಸ್ವಯಂಪ್ರೇರಣೆಯಿಂದ ಘೋರವಾದ ಗಾಯವನ್ನು ಉಂಟುಮಾಡುವುದು) ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 40 ಲಕ್ಷ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಅಲ್ಲದೇ, ಸೆಕ್ಷನ್ 421 (1) (ಬಿ) ಅಡಿಯಲ್ಲಿ ದಂಡ ವಿಧಿಸಲಾಗಿದೆ. ಈ ದಂಡವನ್ನು ಪಾವತಿಸದಿದ್ದಲ್ಲಿ ಅದರ ಮೊತ್ತವನ್ನು ಅಪರಾಧಿಯ ಆಸ್ತಿಯಿಂದ ವಸೂಲಿ ಮಾಡಬಹುದು ಎಂದು ನ್ಯಾಯಾಧೀಶರು ಸ್ಪಷ್ಟಡಿಸಿದ್ದಾರೆ. ಇದೇ ಪ್ರಕರಣದಲ್ಲಿ ಅಪರಾಧಿಯ ಆಪ್ತನೊಬ್ಬ ಬಾಲಾಪರಾಧಿಯಾಗಿದ್ದು, ಆತ ಬಾಲಾಪರಾಧ ನ್ಯಾಯ ಮಂಡಳಿಯ ಮುಂದೆ ವಿಚಾರಣೆಯನ್ನು ಎದುರಿಸುತ್ತಿದ್ದಾನೆ. ಮತ್ತೊಬ್ಬ ಆರೋಪಿ ಮೊಹಮ್ಮದ್ ಸಲೀಂ ಕುಮಾರ್ ಎಂಬಾತನನ್ನು ನ್ಯಾಯಾಲಯವು 326-ಎ ಅಡಿಯಲ್ಲಿ ಗಂಭೀರ ಆರೋಪಗಳಿಂದ ಖುಲಾಸೆಗೊಳಿಸಿದೆ.
ಸಂತ್ರಸ್ತೆಗೆ 23 ಬಾರಿ ಶಸ್ತ್ರಚಿಕಿತ್ಸೆ:ಆ್ಯಸಿಡ್ ದಾಳಿಯ ಸಂತ್ರಸ್ತೆಯ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಸರ್ಕಾರಿ ಅಭಿಯೋಜಕ, ವಕೀಲ ಅಜಾಜ್ ಅಹ್ಮದ್, ಅಪರಾಧದ ತೀವ್ರತೆಯನ್ನು ಒತ್ತಿಹೇಳಿದ್ದರು. ಸಂತ್ರಸ್ತೆಯು ಇದುವರೆಗೆ 23 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ. ಇದಕ್ಕಾಗಿ 48 ಲಕ್ಷ ರೂ.ಗಳ ವೈದ್ಯಕೀಯ ವೆಚ್ಚ ಭರಿಸಲಾಗಿದೆ. ಇದಾದ ಮೇಲೂ ಸಂತ್ರಸ್ತೆಯ ಒಂದು ಕಣ್ಣು ಭಾಗಶಃ ಕುರುಡುತನ ಮತ್ತು ಇನ್ನೊಂದು ಕಣ್ಣು ಸಂಪೂರ್ಣ ಕುರುಡುತನವನ್ನು ಆವರಿಸಿದೆ. ಇದಕ್ಕೆ ಚಿಕಿತ್ಸೆ ಮುಂದುವರಿಸಬೇಕಾದ ಅನಿರ್ವಾಯತೆ ಇದೆ. ವೈದ್ಯಕೀಯ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.