ಕುಲ್ಗಾಮ್:ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಮೂವರು ಭಾರತೀಯ ಯೋಧರು ಮತ್ತು ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಡಿಗಮ್ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಈ ಗುಂಡಿನ ಸಂಘರ್ಷ ನಡೆದಿದೆ. ಈ ಪ್ರದೇಶದಲ್ಲಿ ಮೂರು ಉಗ್ರರು ಸಿಕ್ಕಿಬಿದ್ದಿರುವ ಶಂಕೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
"ಕುಲ್ಗಾಮ್‌ನ ಅಡಿಗಮ್ ದೇವ್ಸರ್ ಪ್ರದೇಶದಲ್ಲಿ ಇನ್ನೂ ಉಗ್ರರು ಅಡಗಿಕೊಂಡಿರುವ ಶಂಕೆಯಿದ್ದು, ಕಾರ್ಯಾಚರಣೆ ಮುಂದುವರೆಸಲಾಗಿದೆ. ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಎನ್‌ಕೌಂಟರ್ ಪ್ರಾರಂಭವಾದವು. ಉಗ್ರರು ಕೂಡ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಆ ಪ್ರದೇಶ ಸುತ್ತುವರೆದಿದ್ದು, ಎನ್‌ಕೌಂಟರ್‌ಗೆ ಪ್ರತಿಯಾಗಿ ದಾಳಿ ನಡೆಸಲಾಗಿದೆ. ಉಗ್ರರನ್ನು ಸದೆ ಬಡಿಯಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ" ಎಂದು ಕಾಶ್ಮೀರ ವಲಯ ಪೊಲೀಸರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
"ನಾಗರಿಕ ಜೀವನ ಮತ್ತು ಆಸ್ತಿಗೆ ಯಾವುದೇ ಹಾನಿಯಾಗಿಲ್ಲ. ಅಡಗಿಕೊಂಡಿರುವ ಭಯೋತ್ಪಾದಕರನ್ನು ಎಚ್ಚರಿಕೆಯಿಂದ ಭೇದಿಸಲಾಗುತ್ತಿದೆ. ಅಡಗಿರುವ ಭಯೋತ್ಪಾದಕರು ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಭದ್ರತಾ ಪಡೆಗಳು ಎಲ್ಲ ಮಾರ್ಗಗಳನ್ನು ಸುತ್ತುವರೆದಿವೆ. ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಉಗ್ರರ ದಾಳಿ ಎಚ್ಚರಿಕೆ; ಮುಂಬೈನಲ್ಲಿ ಹೈಅಲರ್ಟ್ - Mumbai Alert