ಅಹಮದಾಬಾದ್ (ಗುಜರಾತ್) : ಇಲ್ಲಿನ ಎಸ್‌ಜಿ ಹೆದ್ದಾರಿಯಲ್ಲಿರುವ ಖ್ಯಾತಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದೀಗ ವಿವಾದಕ್ಕೀಡಾಗಿದೆ. ಆಸ್ಪತ್ರೆಯಲ್ಲಿ ಸುಮಾರು 19 ಜನರಿಗೆ ಕುಟುಂಬಸ್ಥರ ಅನುಮತಿಯಿಲ್ಲದೆ ಆಂಜಿಯೋಗ್ರಫಿ ಮಾಡಿದ್ದರಿಂದ ಇಬ್ಬರು ರೋಗಿಗಳು ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ.
ನ.10 ರಂದು ಉಚಿತ ಶಿಬಿರ ಆಯೋಜಿಸಲಾಗಿತ್ತು : ಇಡೀ ಘಟನೆ ಕುರಿತು ಮಾತನಾಡಿದ ಮೃತರ ಕುಟುಂಬಸ್ಥರು, ಕಡಿ ತಾಲೂಕಿನ ಬೋರಿಸ್ನಾ ಗ್ರಾಮದಲ್ಲಿ ಖ್ಯಾತಿ ಆಸ್ಪತ್ರೆ ವತಿಯಿಂದ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಮಾಹಿತಿ ಪ್ರಕಾರ, ಈ ಉಚಿತ ಪರೀಕ್ಷಾ ಶಿಬಿರದಲ್ಲಿ 80 ರಿಂದ 90 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದಿದ್ದಾರೆ.
ಖ್ಯಾತಿ ಆಸ್ಪತ್ರೆಗೆ 19 ಜನರನ್ನು ಕರೆತರಲಾಯಿತು : ಬೋರಿಸ್ನಾ ಗ್ರಾಮದ 19 ಜನರನ್ನು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಖ್ಯಾತಿ ಆಸ್ಪತ್ರೆಗೆ ಕರೆತರಲಾಯಿತು. 19 ರೋಗಿಗಳಲ್ಲಿ 12 ಜನರಿಗೆ ಆಂಜಿಯೋಗ್ರಫಿ ಮಾಡಲಾಗಿದೆ. ಇದರಲ್ಲಿ 12 ರೋಗಿಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಪ್ರಕಾರ, ಅವರಿಗೆ ಮೊದಲು ಯಾವುದೇ ರೀತಿಯ ಕಾಯಿಲೆ ಇರಲಿಲ್ಲ. ತಪಾಸಣೆಗೆ ಮಾತ್ರ ಅವರನ್ನು ಕರೆಸಲಾಗಿದ್ದು, ನಂತರ ನಮ್ಮ ಅನುಮತಿಯಿಲ್ಲದೆ ಆಂಜಿಯೋಗ್ರಫಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
PMJAY ಯೋಜನೆಯಿಂದ ರೂ. 1 ಲಕ್ಷದ 28 ಸಾವಿರ ಕಡಿತ: ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಸೇನ್ಮಾ ನಾಗರಭಾಯ್ ಮತ್ತು ಮಹೇಶ್ ಬಾರೋಟ್ ಸಾವನ್ನಪ್ಪಿದ್ದಾರೆ. ಈ ಪರೀಕ್ಷೆಗಾಗಿ ಪಿಎಂಜೆಎವೈ ಯೋಜನೆಯಲ್ಲಿ 1 ಲಕ್ಷ 28 ಸಾವಿರ ರೂ.ಗಳನ್ನು ಕಡಿತಗೊಳಿಸಲಾಗಿದೆ. ಸರ್ಕಾರದ ಯೋಜನೆಯಿಂದ ಆಸ್ಪತ್ರೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.