ನವದೆಹಲಿ:ಭಯೋತ್ಪಾದನೆ ನಡೆಸಿದ ಆರೋಪದ ಮೇಲೆ ಜೈಲಲ್ಲಿರುವ ಇಬ್ಬರು ಕೈದಿಗಳು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಈ ಇಬ್ಬರ ಪ್ರಮಾಣ ವಚನ ಸ್ವೀಕಾರ, ಸಂಸತ್ ಕಲಾಪದಲ್ಲಿ ಭಾಗಿಯಾಗುವ ಅವಕಾಶ ಸಿಗಲಿದೆಯಾ ಎಂಬುದು ಪ್ರಶ್ನೆಯಾಗಿದೆ.
ಹೊಸ ಸರ್ಕಾರ ರಚನೆಯಾಗಿ ನಡೆಯುವ ಸಂಸತ್ ಕಲಾಪಗಳಲ್ಲಿ ಜೈಲಿನಲ್ಲಿರುವ ಚುನಾಯಿತ ಪ್ರತಿನಿಧಿಗಳು ಭಾಗಿಯಾಗಲು ಅವಕಾಶವಿಲ್ಲ. ಆದರೆ, ಸಂಸತ್ತಿನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಂವಿಧಾನಿಕ ಹಕ್ಕನ್ನು ಹೊಂದಿದ್ದಾರೆ. ಕಾಯ್ದೆಗಳಿಗೆ ಪರ- ವಿರೋಧ ಅಭಿಪ್ರಾಯ ವ್ಯಕ್ತವಾದಾಗ, ಮತ ಹಾಕುವ ಹಕ್ಕು ಹೊಂದಿದ್ದಾರೆಯೇ ಎಂಬುದು ಮತ್ತೊಂದು ಪ್ರಶ್ನೆ.
ಆಯ್ಕೆಯಾದವರು ಯಾರು?:ಜೈಲಿನಲ್ಲಿರುವ ಖಲಿಸ್ತಾನಿ ಪ್ರತ್ಯೇಕವಾದಿ ಉಗ್ರ ಅಮೃತಪಾಲ್ ಸಿಂಗ್ ಪಂಜಾಬ್‌ನ ಖದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಭಯೋತ್ಪಾದಕ ಕೃತ್ಯಗಳು ಹಣಕಾಸು ನೆರವು ನೀಡಿದ ಆರೋಪದ ಮೇಲೆ ಕಂಬಿ ಎಣಿಸುತ್ತಿರುವ ಶೇಖ್ ಅಬ್ದುಲ್ ರಶೀದ್ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಲ್ಲಿ ಗೆದ್ದಿದ್ದಾರೆ.
ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ಅಬ್ದುಲ್ ರಶೀದ್ನನ್ನು ಬಂಧಿಸಿ 2019ರ ಆಗಸ್ಟ್ 9 ರಿಂದ ತಿಹಾರ್ ಜೈಲಿನಲ್ಲಿ ಇಡಲಾಗಿದೆ. ಇನ್ನು, ಅಮೃತ್ಪಾಲ್ ಸಿಂಗ್ 2023ರ ಏಪ್ರಿಲ್ನಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದ್ದು, ಅಸ್ಸಾಂನ ದಿಬ್ರುಗಢ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಹೀಗಿದೆ ಪ್ರಮಾಣ ವಚನಕ್ಕೆ ಅವಕಾಶ:ಜೈಲಿನಲ್ಲಿರುವ ಚುನಾಯಿತರಾದ ಈ ಸಂಸದರಿಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡುವುದು ಹೇಗೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಬಗ್ಗೆ ಸಂವಿಧಾನ ತಜ್ಞ ಮತ್ತು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ. ಆಚಾರಿ ಮಾಹಿತಿ ನೀಡಿದ್ದು, ಚುನಾಯಿತರಾದ ಬಳಿಕ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಸಂವಿಧಾನವೇ ಅವಕಾಶ ನೀಡಿದೆ. ಪ್ರಸ್ತುತ ಜೈಲಿನಲ್ಲಿರುವ ರಶೀದ್ ಮತ್ತು ಸಿಂಗ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಂಸತ್ತಿಗೆ ಬೆಂಗಾವಲಿನಲ್ಲಿ ಬರಲು ಅನುಮತಿ ಕೋರಬೇಕು. ಪ್ರತಿಜ್ಞೆ ಪಡೆದ ಬಳಿಕ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಸಂವಿಧಾನದ 101(4)ನೇ ವಿಧಿ ಸ್ಪೀಕರ್ ಅನುಮತಿ ಇಲ್ಲದೇ ಉಭಯ ಸದನಗಳ ಸದಸ್ಯರು ಕಲಾಪಗಳಿಗೆ ಗೈರು ಹಾಜರಾಗುವಂತಿಲ್ಲ. ಜೈಲು ಶಿಕ್ಷ ಅನುಭವಿಸುತ್ತಿರುವ ಕಾರಣ ಪ್ರಮಾಣ ವಚನ ಸ್ವೀಕರಿಸಿದ ನಂತರ ಸದನಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಸ್ಪೀಕರ್‌ಗೆ ಮನವಿ ಪತ್ರ ಬರೆಯಬೇಕು. ಸ್ಪೀಕರ್ ಇದನ್ನು ಸದನ ಸಮಿತಿಗೆ ಕಳುಹಿಸುತ್ತಾರೆ. ಸಮಿತಿಯು ಇವರಿಗೆ ಅನುಮತಿ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತದೆ. ಬಳಿಕ ಇದನ್ನು ಸ್ಪೀಕರ್ ಸದನದಲ್ಲಿ ಮತಕ್ಕೆ ಹಾಕುತ್ತಾರೆ. ಸದನ ಇದನ್ನು ತೀರ್ಮಾನ ಮಾಡುತ್ತದೆ ಎಂದರು.
ಅನರ್ಹತೆ ನಿಯಮ:ಇನ್ನು, ಪ್ರಕರಣದಲ್ಲಿ ಆರೋಪಿಗಳಾದ ಅಬ್ದುಲ್ ರಶೀದ್ ಅಥವಾ ಅಮೃತ್ಪಾಲ್ ಸಿಂಗ್ ತಪ್ಪಿತಸ್ಥರೆಂದು ನಿರ್ಧಾರವಾಗಿ ಕನಿಷ್ಠ ಎರಡು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾದರೆ ಇಬ್ಬರ ಸಂಸತ್ ಸದಸ್ಯತ್ವ ರದ್ದಾಗುತ್ತದೆ. ಈ ಬಗ್ಗೆ ಸುಪ್ರೀಂಕೋರ್ಟ್ 2013 ರಲ್ಲಿ ತೀರ್ಪು ನೀಡಿದ್ದು, ಯಾವುದೇ ಸಂಸದರು ಮತ್ತು ಶಾಸಕರು 2 ವರ್ಷ ಜೈಲು ಶಿಕ್ಷೆಗೆ ಗುರಿಯಾದರೆ, ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಬಹುದು ಎಂದಿದೆ.
ಇದನ್ನೂ ಓದಿ:ಮೋದಿ ರಾಜೀನಾಮೆ ಸಲ್ಲಿಕೆ; ಜೂ.8ಕ್ಕೆ ಮತ್ತೊಂದು ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ? - PM MODI RESIGNS