ಕೊಟ್ಟಾಯಂ, ಕೇರಳ: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ವಾರ್ಷಿಕ ಯಾತ್ರೆಯ ಮೊದಲ ಹಂತದ ಮುಕ್ತಾಯ ಸೂಚಿಸುವ ಪ್ರಮುಖ ಆಚರಣೆಯಾದ ಮಂಡಲ ಪೂಜೆಯು ಡಿಸೆಂಬರ್ 26 ರಂದು ನಡೆಯಲಿದೆ.
ದೇವಸ್ಥಾನದ ಪ್ರಧಾನ ಅರ್ಚಕ ಕಂದರಾರು ರಾಜೀವರು ಅವರು ಅಪರಾಹ್ನ 12.30 ರ ನಡುವೆ ಧಾರ್ಮಿಕ ವಿಧಿಗಳನ್ನು ನೆರವೇರಿಸಲಿದ್ದಾರೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಪಿ ಎಸ್ ಪ್ರಶಾಂತ್ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಗಳನ್ನು ನೀಡಿದ್ದಾರೆ.
ಪತ್ತನಂತಿಟ್ಟದ ಅರನ್ಮುಲ ಪಾರ್ಥಸಾರಥಿ ದೇವಸ್ಥಾನದಿಂದ ಭಾನುವಾರ ಆರಂಭವಾದ ವಿಧ್ಯುಕ್ತವಾದ ತಂಕ ಅಂಕಿ ಮೆರವಣಿಗೆ ಬುಧವಾರ ಮಧ್ಯಾಹ್ನದ ವೇಳೆಗೆ ಪಂಬಾ ತಲುಪಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ಪಾರ್ಥಸಾರಥಿ ದೇವಸ್ಥಾನದಿಂದ ಹೊರಟಿರುವ ಮೆರವಣಿಗೆಯನ್ನು ಪಂಬಾದಲ್ಲಿ ದೇವಸ್ವಂ ಸಚಿವ ವಿ ಎನ್ ವಾಸವನ್ ಸ್ವಾಗತಿಸಲಿದ್ದಾರೆ, ನಂತರ ಸಂಜೆ ದೇವಾಲಯದ ಸಂಕೀರ್ಣವಾಗಿರುವ ಸನ್ನಿಧಾನಂನಲ್ಲಿ ಟಿಡಿಬಿ ಅಧ್ಯಕ್ಷರು ಮತ್ತು ಸದಸ್ಯರು ಮೆರವಣಿಗೆಗೆ ಸ್ವಾಗತ ಕೋರಲಿದ್ದಾರೆ.
ನಂತರ, ತಂಕ ಅಂಕಿ ಪವಿತ್ರ ಉಡುಪನ್ನು ಆರತಿಯ ಮೊದಲು ಪ್ರಧಾನ ದೇವತೆಯ ವಿಗ್ರಹದ ಮೇಲೆ ಹೊದಿಸಲಾಗುತ್ತದೆ. ಮಂಡಲ ಪೂಜೆ ಮತ್ತು ನೆಯ್ಯಭಿಷೇಕದ ನಂತರ ಅಯ್ಯಪ್ಪ ದೇವಾಲಯದ ದ್ವಾರಗಳನ್ನು ಡಿಸೆಂಬರ್ 26 ರಂದು ರಾತ್ರಿ 11 ಗಂಟೆಗೆ ಮುಚ್ಚಲಾಗುತ್ತದೆ. ಇದು ವಾರ್ಷಿಕ ಯಾತ್ರೆಯ ಮೊದಲ ಪಾದದ ಮುಕ್ತಾಯವನ್ನು ಸೂಚಿಸುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಮಕರವಿಳಕ್ಕು ಉತ್ಸವಕ್ಕಾಗಿ ಡಿಸೆಂಬರ್ 30 ಓಪನ್: ಮಕರವಿಳಕ್ಕು ಉತ್ಸವಕ್ಕಾಗಿ ಶಬರಿಮಲೆಯನ್ನು ಡಿಸೆಂಬರ್ 30 ರಂದು ಸಂಜೆ ಮತ್ತೆ ಓಪನ್ ಮಾಡಲಾಗುತ್ತದೆ. ಜನವರಿ 14 ರಂದು ಪ್ರಮುಖ ಹಾಗೂ ಮಹತ್ವದ ಆಚರಣೆ ನಡೆಯಲಿದೆ ಎಂದು ಪ್ರಶಾಂತ್ ಹೇಳಿದರು.
ಬುಕಿಂಗ್ ಗಳನ್ನು ಸೀಮಿತಿಗೊಳಿಸಿದ ಮಂಡಳಿ: ಕ್ರೌಡ್ ಮ್ಯಾನೇಜ್‌ಮೆಂಟ್‌ನ ಭಾಗವಾಗಿ ಡಿಸೆಂಬರ್ 25 ಮತ್ತು 26 ರಂದು ಈವೆಂಟ್‌ಗಳಿಗಾಗಿ ವರ್ಚುಯಲ್ ಕ್ಯೂ ಬುಕಿಂಗ್‌ಗಳನ್ನು 50,000 ಮತ್ತು 60,000 ಗೆ ಸೀಮಿತಗೊಳಿಸಲಾಗಿದೆ. ಈ ಮಿತಿಯು ಹೈಕೋರ್ಟ್ ನಿರ್ದೇಶನಕ್ಕೆ ಅನುಗುಣವಾಗಿರುತ್ತದೆ ಎಂದು ಟಿಡಿಬಿ ಅಧ್ಯಕ್ಷರು ತಿಳಿಸಿದ್ದಾರೆ.
ಮಕರವಿಳಕ್ಕು ಹಬ್ಬದ ಅಂಗವಾಗಿ ಜನವರಿ 13 ಮತ್ತು 14 ರಂದು ವರ್ಚುಯಲ್ ಕ್ಯೂ ಬುಕ್ಕಿಂಗ್ ಸಂಖ್ಯೆಯನ್ನು 50,000 ಮತ್ತು 40,000 ಕ್ಕೆ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.
ಈ ವರ್ಷ ಇಷ್ಟು ಭಕ್ತರು ಶಬರಿಮಲೆಗೆ ಭೇಟಿ: ಪ್ರಸಕ್ತ ಸಾಲಿನಲ್ಲಿ ಡಿಸೆಂಬರ್ 23 ರವರೆಗೆ ಒಟ್ಟು 30,87,049 ಯಾತ್ರಾರ್ಥಿಗಳು ಭಗವಾನ್ ಅಯ್ಯಪ್ಪ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಟಿಡಿಬಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 4.46 ಲಕ್ಷ ಹೆಚ್ಚು ಭಕ್ತರು ಬಂದಿದ್ದಾರೆ.
2018 ರ ಪ್ರವಾಹದ ನಂತರ ನಿಲ್ಲಿಸಲಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವಾದ "ಪಂಬಾ ಸಂಗಮಂ" ಅನ್ನು ಮರುಪ್ರಾರಂಭಿಸಲು TDB ನಿರ್ಧರಿಸಿದೆ ಎಂದು ಪ್ರಶಾಂತ್ ಹೇಳಿದರು. ಇದು ಮುಂದಿನ ವರ್ಷ ಜನವರಿ 12 ರಿಂದ ನಡೆಯಲಿದೆ. ಮುಂಬರುವ ಮಕರವಿಳಕ್ಕು ಉತ್ಸವಕ್ಕೆ ಅಯ್ಯಪ್ಪ ದೇವರ ಚಿನ್ನದ ಲಾಕೆಟ್‌ಗಳನ್ನು ಹೊರತರಲು ಮಂಡಳಿ ನಿರ್ಧರಿಸಿದೆ.