ನವದೆಹಲಿ:18ನೇ ಲೋಕಸಭೆಯ ಅಧಿವೇಶನದ 4ನೇ ದಿನವಾದ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನಲ್ಲಿ ಉಭಯ ಸದನಗಳ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಕೇಂದ್ರದಲ್ಲಿ 3ನೇ ಬಾರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾದ ನಂತರದ ಮುರ್ಮು ಅವರ ಮೊದಲ ರಾಷ್ಟ್ರಪತಿ ಭಾಷಣವಾಗಲಿದೆ.
ಅವರ ಭಾಷಣದ ನಂತರ, ಸಂಸದರ ಚರ್ಚೆಗಾಗಿ ಸಂಸತ್ತಿನ ಉಭಯ ಸದನಗಳಲ್ಲಿ ಧನ್ಯವಾದ ಮಂಡಿಸಲಾಗುತ್ತದೆ. 18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 24ರಿಂದ ಆರಂಭವಾಗಿದೆ. ಗುರುವಾರದಿಂದ(ಇಂದಿನಿಂದ) ರಾಜ್ಯಸಭಾ ಅಧಿವೇಶನ ಆರಂಭವಾಗಲಿದೆ.
ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಸದನದಲ್ಲಿ ಪ್ರಸ್ತಾವನೆಯನ್ನು ಮಂಡಿಸಿದ ಬಳಿಕ ಎನ್‌ಡಿಎ ಅಭ್ಯರ್ಥಿ ಓಂ ಬಿರ್ಲಾ ಸತತ ಎರಡನೇ ಬಾರಿಗೆ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು. ಬಿರ್ಲಾ ಅವರು ಪ್ರತಿಪಕ್ಷಗಳ ಅಭ್ಯರ್ಥಿಯಾದ ಹಾಗೂ ಎಂಟು ಅವಧಿಯ ಕಾಂಗ್ರೆಸ್ ಸಂಸದ ಕೆ. ಸುರೇಶ್ ಅವರನ್ನು ಧ್ವನಿ ಮತದ ಮೂಲಕ ಸೋಲಿಸಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಓಂ ಬಿರ್ಲಾ ಅವರನ್ನು ಸಭಾಧ್ಯಕ್ಷ ಪೀಠದತ್ತ ಕರೆದುಕೊಂಡು ಹೋದರು. ಇದೇ ವೇಳೆ ರಾಹುಲ್ - ಮೋದಿ ಹಸ್ತಲಾಘವ ಮಾಡಿಕೊಂಡಿದ್ದು ಗಮನ ಸೆಳೆಯಿತು.