ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಭಾರತೀಯ ಪೌರತ್ವ ಪ್ರಮಾಣಪತ್ರ ಹಸ್ತಾಂತರ ಶಿಬಿರದಲ್ಲಿ ಪಾಕಿಸ್ತಾನದಿಂದ ಬಂದು ಅಹಮದಾಬಾದ್‌ನಲ್ಲಿ ನೆಲೆಸಿರುವ 18 ಜನನಿರಾಶ್ರಿತ ಹಿಂದೂಗಳಿಗೆ ಶನಿವಾರ ಪೌರತ್ವ ಪ್ರಮಾಣಪತ್ರವನ್ನು ಕೇಂದ್ರ ಸಚಿವ ಹರ್ಷ ಸಾಂಘ್ವಿ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಸಚಿವರು, ನವಭಾರತದ ಕನಸು ನನಸಾಗಿಸಲು ಒಟ್ಟಾಗಿ ಕೆಲಸ ಮಾಡುವಂತೆ ಒತ್ತಾಯಿಸಿದರು. ದೇಶದ ಅಭಿವೃದ್ಧಿ ಪಯಣದಲ್ಲಿ ನೀವೆಲ್ಲರೂ ಪಾಲ್ಗೊಳ್ಳುವ ಸಂಕಲ್ಪ ಮಾಡುತ್ತೀರಿ ಎಂದು ನಿರೀಕ್ಷಿಸಲಾಗಿದೆ. ಭಾರತೀಯ ಪೌರತ್ವ ಪಡೆದ ಎಲ್ಲರನ್ನೂ ಸಮಾಜದ ಮುಖ್ಯವಾಹಿನಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿವೆ. ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಸುಲಭ ಮತ್ತು ತ್ವರಿತವಾಗಿ ಭಾರತೀಯ ಪೌರತ್ವವನ್ನು ಪಡೆಯಲು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶೇಷ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಇದೇ ವೇಳೆ ಹೇಳಿದರು.
ಅಹಮದಾಬಾದ್, ಗಾಂಧಿನಗರ ಮತ್ತು ಕಚ್ ಜಿಲ್ಲಾಧಿಕಾರಿಗಳಿಗೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಭಾರತೀಯ ಪೌರತ್ವ ನೀಡುವ ಹಕ್ಕು ನೀಡಲಾಗಿದೆ. ಅಹಮದಾಬಾದ್‌ನಲ್ಲಿ 2017ರಿಂದ 2023ರವರೆಗೆ ಒಟ್ಟು 1167 ಜನರಿಗೆ ಭಾರತೀಯ ಪೌರತ್ವದ ಪ್ರಮಾಣಪತ್ರಗಳನ್ನು ನೀಡಲಾಗಿದೆ.
ಏನಿದು ಸಿಎಎ?:ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಡಿಸೆಂಬರ್ 31, 2014 ರೊಳಗೆ ಭಾರತಕ್ಕೆ ಬಂದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ನಾಗರಿಕತ್ವ ನೀಡುವ ಉದ್ದೇಶವನ್ನು ಈ ಕಾಯಿದೆ ಹೊಂದಿದೆ. ಈ ಕುರಿತ ಕಾಯಿದೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019ರ ಡಿಸೆಂಬರ್ 11ರಂದು ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿತು. ಅದೇ ವರ್ಷ ಡಿಸೆಂಬರ್ 12ರಂದು ರಾಷ್ಟ್ರಪತಿಗಳಿಂದ ಒಪ್ಪಿಗೆಯನ್ನೂ ಪಡೆಯಲಾಯಿತು. ಈ ಕಾಯಿದೆ 2020ರ ಜನವರಿ 10 ರಿಂದ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಗೃಹ ಸಚಿವಾಲಯ ಘೋಷಿಸಿತ್ತು. ಆದರೆ, ಕಾಯ್ದೆಯ ಕೆಲ ನಿಯಮಗಳ ತಿದ್ದುಪಡಿ ಕಾರಣ ಅನುಷ್ಠಾನ ವಿಳಂಬವಾಗಿತ್ತು.
ಇದನ್ನೂ ಓದಿ:ನಮಾಜ್ ವಿಚಾರವಾಗಿ ಗುಜರಾತ್ ವಿವಿಯಲ್ಲಿ ವಿದೇಶದ ನಾಲ್ವರು ವಿದ್ಯಾರ್ಥಿಗಳ ಮೇಲೆ ಹಲ್ಲೆ