ಬಿಜಾಪುರ\ಸುಕ್ಮಾ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಿನ್ನೆ ಬೆಳಗ್ಗೆ ಭದ್ರತಾ ಸಿಬ್ಬಂದಿ ಮತ್ತು ನಕ್ಸಲೀಯರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 12 ನಕ್ಸಲರು ಹತರಾಗಿದ್ದಾರೆ. ನಕ್ಸಲರ ಮೃತದೇಹಗಳನ್ನು ಉಸೂರು ಬಳಿಯ ನಂಬಿ ಕ್ಯಾಂಪ್‌ಗೆ ತರಲಾಗಿದ್ದು, ಗುರುತು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಬಸ್ತಾರ್ ಪ್ರದೇಶದ ಕಾಡುಗಳಲ್ಲಿ ಹೆಚ್ಚಿನ ಸಂಖ್ಯೆಯ ನಕ್ಸಲರು ಇರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಬಿಜಾಪುರ, ಸುಕ್ಮಾ ಮತ್ತು ದಾಂತೇವಾಡೆಯಿಂದ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಪಡೆಗಳು, ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಮತ್ತು ಸಿಆರ್‌ಪಿಎಫ್‌ನ 229 ನೇ ಬೆಟಾಲಿಯನ್ ಕಾರ್ಯಾಚರಣೆ ಪ್ರಾರಂಭಿಸಿದ್ದವು.
ಬಿಜಾಪುರದ ಪೂಜಾರಿ ಕಂಕೇರ್ ಮತ್ತು ಮರುದ್ಬಾಕ ಅರಣ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಭದ್ರತಾ ಪಡೆಗಳನ್ನು ಕಂಡ ನಕ್ಸಲರು ಗುಂಡಿನ ದಾಳಿ ಆರಂಭಿಸಿದ್ದರು. ಅದಕ್ಕೆ ಪ್ರತಿಯಾಗಿ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದರು.
''ಬಸ್ತಾರ್ ಐಜಿ ಸುಂದರರಾಜ್ ಪಿ ಮತ್ತು ಸಿಆರ್‌ಪಿಎಫ್ ಐಜಿ ಸಂಪೂರ್ಣ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ನಿನ್ನೆ ಎನ್‌ಕೌಂಟರ್ ವೇಳೆ ಮೃತಪಟ್ಟ 12 ನಕ್ಸಲರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ'' ಎಂದು ಬಿಜಾಪುರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹತ್ಯೆಯಾದ ನಕ್ಸಲೀಯರು ಬಸ್ತಾರ್‌ನಲ್ಲಿರುವ ನಕ್ಸಲೀಯರ ಪ್ರಬಲ ಘಟಕವಾದ PLGA (ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ, PLGA) ನ ಸದಸ್ಯರು ಎಂದು ಬಸ್ತಾರ್ ಐಜಿ ಹೇಳಿದ್ದಾರೆ. ಹತ್ಯೆಯಾದ ನಕ್ಸಲೀಯರ ಗುರುತು ಇನ್ನೂ ಪತ್ತೆಯಾಗಿಲ್ಲ.
"ಪಿಎಲ್‌ಜಿಎ ಬೆಟಾಲಿಯನ್ ನಂ. 1 ಎಂಬುದು ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಬಸ್ತಾರ್ ಪ್ರದೇಶದಲ್ಲಿನ ಪ್ರಬಲ ಮಾವೋವಾದಿಗಳ ಸಂಘಟನೆ ಎಂದು ಪರಿಗಣಿಸಲಾಗಿದೆ. ದಕ್ಷಿಣ ಬಸ್ತಾರ್‌ನಲ್ಲಿ ಭದ್ರತಾ ಪಡೆಗಳ ಮೇಲೆ ಅನೇಕ ಮಾರಣಾಂತಿಕ ದಾಳಿಗಳನ್ನು ನಡೆಸಲಾಗಿದೆ" ಎಂದು ಐಜಿ ಸುಂದರರಾಜ್ ಹೇಳಿದ್ದಾರೆ.