ಶಿಮ್ಲಾ(ಹಿಮಾಚಲ ಪ್ರದೇಶ): ಶಾಲಾ ಪಕ್ಕದ ಅಂಗಡಿಯವನೊಬ್ಬ ಸುಮಾರು 11 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಶಾಲಾ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ.
ಶಾಲಾ ವಿದ್ಯಾರ್ಥಿನಿಯರು ವಸ್ತುಗಳನ್ನು ಖರೀದಿಸಲು ಅಂಗಡಿಗೆ ಹೋದಾಗ ಆರೋಪಿಯು ಅನುಚಿತವಾಗಿ ಮತ್ತು ಅಶ್ಲೀಲವಾಗಿ ಸ್ಪರ್ಶಿಸುತ್ತಿದ್ದ. ಒಬ್ಬಿಬ್ಬರೊಂದಿಗೆ 11 ಬಾಲಕಿಯರ ಜೊತೆಗೂ ಇದೇ ವರ್ತಿಸಿದ್ದ. ಇವರಲ್ಲಿ 7ನೇ ತರಗತಿಯಿಂದ 11ನೇ ತರಗತಿವರೆಗಿನ ವಿದ್ಯಾರ್ಥಿನಿಯರು ಸೇರಿದ್ದಾರೆ. ವಿದ್ಯಾರ್ಥಿನಿಯೊಬ್ಬಳು ಧೈರ್ಯ ಮಾಡಿ ಶಾಲೆಯ ಮುಖ್ಯ ಶಿಕ್ಷಕರಿಗೆ ಈ ವಿಷಯ ತಿಳಿಸಿದ್ದಾಳೆ.
ಇದಾದ ಬಳಿಕ ಶಾಲಾ ಎಸ್‌ಎಂಸಿ ಸಭೆಯಲ್ಲಿ ನೊಂದ ವಿದ್ಯಾರ್ಥಿನಿಗಳಿಂದ ಮಾಹಿತಿ ಪಡೆದು, ಈ ವಿಷಯದ ಬಗ್ಗೆ ಪೊಲೀಸರಿಗೆ ಒಪ್ಪಿಸಲು ಶಿಕ್ಷಕರು ನಿರ್ಧರಿಸಿದ್ದರು. ಜೂನ್ 15ರಂದು ಶಾಲೆಯ ಲೈಂಗಿಕ ಕಿರುಕುಳ ಸಮಿತಿ ಅಧ್ಯಕ್ಷೆಯಾಗಿರುವ ಶಿಕ್ಷಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ ಎಂದು ತಿಳಿದು ಬಂದಿದೆ.
ಹೀಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿ ಆರೋಪಿಯನ್ನು ಇಂದು ಸಂಜೆ ಬಂಧಿಸಲಾಗಿದೆ. ಈ ಬಗ್ಗೆ ಶಿಮ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಗಾಂಧಿ ಮಾಹಿತಿ ನೀಡಿ, ಆರೋಪಿ ಅಂಗಡಿಯವನು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಈಗಾಗಲೇ ಕೊಲೆ ಪ್ರಕರಣದಲ್ಲಿ ಶಿಕ್ಷೆಯನ್ನೂ ಅನುಭವಿಸಿದ್ದಾನೆ. ಆದ್ದರಿಂದ ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ, ಪ್ರಕರಣದ ತನಿಖೆಗೆ ಡಿಎಸ್ಪಿ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬಾಂಬೆ ಐಐಟಿಯಲ್ಲಿ ಶ್ರೀರಾಮನ ಅಣಕಿಸಿ ನಾಟಕ ಪ್ರದರ್ಶನ: 8 ವಿದ್ಯಾರ್ಥಿಗಳಿಗೆ ₹1.2 ಲಕ್ಷದವರೆಗೆ ದಂಡ