ಧರ್ಮಪುರಿ (ತಮಿಳುನಾಡು):ಬಾಲಕನಮೇಲೆ 12ನೇ ತರಗತಿ ವಿದ್ಯಾರ್ಥಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ ಮಾಡಿರುವ ಘಟನೆ ಧರ್ಮಪುರಿಯಲ್ಲಿ ಬುಧವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯ ವಿವರ: 5ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದ. ಮಗ ನಾಪತ್ತೆಯಾದ ವಿಷಯ ತಿಳಿದು ಪೋಷಕರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೇ ನೆರೆಹೊರೆಯವರಲ್ಲಿ ವಿಚಾರಿಸಿದ್ದಾರೆ. ಈ ವೇಳೆ, ಬಾಲಕನನ್ನು 12ನೇ ತರಗತಿಯ ಮತ್ತೋರ್ವ ಬಾಲಕ ತನ್ನೊಂದಿಗೆ ಕರೆದುಕೊಂಡು ಹೋಗಿರುವುದಾಗಿ ಹೇಳಿದ್ದಾರೆ.
ಹುಡುಕಾಟ ಮುಂದುವರೆಸಿದ ಪೋಷಕರಿಗೆ ಸಂಜೆ ಕಳೆದರು ತಮ್ಮ ಮಗ ಮಾತ್ರ ಪತ್ತೆಯಾಗಿರಲಿಲ್ಲ. ಇದರಿಂದ ಗಾಬರಿಗೊಂಡು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ತನಿಖೆ ಆರಂಭಿಸಿದ ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ 12ನೇ ತರಗತಿಯವ ತನ್ನೊಂದಿಗೆ ಬಾಲಕನನ್ನು ಕರೆದುಕೊಂಡು ಹೋಗಿದ್ದು ಪತ್ತೆಯಾಗಿದೆ. ಅಲ್ಲದೇ ಹಿಂತಿರುಗುವಾಗ ಆತ ಒಬ್ಬನೇ ಹಿಂತಿರುಗಿರುವುದು ಸಿಸಿಟಿವಿಯಲ್ಲಿ ಕಂಡು ಬಂದಿದೆ.
ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆಯ ಬಗ್ಗೆ ಬಾಯ್ಬಿಟ್ಟಿದ್ದಾನೆ. ತಾನು 12ನೇ ತರಗತಿಯಲ್ಲಿ ಓದುತಿರುವುದಾಗಿ ತಿಳಿಸಿದ ಬಾಲಕ ತನ್ನೊಂದಿಗೆ ಕರೆದೊಯ್ದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಆತ ಯಾರಿಗಾದರು ಹೇಳುತ್ತಾನೆ ಎಂಬ ಭಯದಿಂದ ಬಾವಿಗೆ ಎಸೆದಿರುವುದಾಗಿ ಹೇಳಿದ್ದಾನೆ.
ಕೂಡಲೇ ಪೊಲೀಸರು ಬಾವಿ ಬಳಿ ತೆರಳಿ ನೋಡಿದಾಗ ಬಾಲಕನ ಶವ ಪತ್ತೆಯಾಗಿದೆ. ನಂತರ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಧರ್ಮಪುರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಕೃತ್ಯಕ್ಕೂ ಮುನ್ನಾ 12ನೇ ತರಗತಿಯ ಬಾಲಕ ಗಾಂಜಾ ಸೇವನೆ ಮಾಡಿದ್ದ ಎಂಬುದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ಎಸಗಿದ ಬಾಲಕನ ವಿರುದ್ಧ ಲೈಂಗಿಕ ದೌರ್ಜನ್ಯ, ಅಪಹರಣ ಮತ್ತು ಕೊಲೆಗೆ ಸಂಬಂಧಿಸಿದ 3 ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತು ಬಾಲಕನ ಸಂಬಂಧಿ ಪ್ರತಿಕ್ರಿಯಿಸಿ, ಲೈಂಗಿಕ ದೌರ್ಜನ್ಯ ಎಸಗಿ ಬಾವಿಗೆ ಎಸೆದು ಕೊಂದ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಲ್ಲದೇ ಇಲ್ಲಿಯ ಯುವಕರು ಗಾಂಜಾ ಸೇವನೆ ಮಾಡುತ್ತಿದ್ದಾರೆ. ತಮಿಳುನಾಡು ಸರ್ಕಾರ ಮತ್ತು ಪೊಲೀಸರು ಕೂಡಲೇ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ಆರೋಪಿಗಳ ಬಂಧನ