ಹೈದರಾಬಾದ್:ದೇಶಾದ್ಯಂತ ವರದಿಯಾದಪ್ರತ್ಯೇಕ ಘಟನೆಗಳಲ್ಲಿ ಮಕ್ಕಳು ಸೇರಿದಂತೆ ಒಟ್ಟು 10 ಜನ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟರೆ, ಜಾರ್ಖಂಡ್ನ ಬೊಕಾರೊ ಜಿಲ್ಲೆಯ ಬಿಶೇಶ್ವರ್ ಧಾಮ್ ದೇವಾಲಯದ ಕೊಳದಲ್ಲಿ ಮೂವರು ಮಕ್ಕಳ ಶವಗಳು ಪತ್ತೆಯಾಗಿವೆ. ಮತ್ತೊಂದೆಡೆ, ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದ ಮೂವರು ಅಸುನೀಗಿದ ಘಟನೆ ರಾಜಸ್ತಾನದ ಭರತ್‌ಪುರ ಜಿಲ್ಲೆಯ ಲಖನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಆಂಧ್ರಪ್ರದೇಶದಲ್ಲಿ ನಾಲ್ವರು ಸಾವು:ಮಕ್ಕಳೊಂದಿಗೆ ಕುಟುಂಬವೊಂದು ಬೇಸಿಗೆ ರಜೆ ಕಳೆಯಲು ಹೈದರಾಬಾದ್‌ನಿಂದ ಬಾಪಟ್ಲಕ್ಕೆ ಬಂದಿತ್ತು. ಇಲ್ಲಿನ ನಲ್ಲಮಾಡ ನಾಲೆಯಲ್ಲಿ ಸ್ನಾನ ಮಾಡಲೆಂದು ನೀರಿಗಿಳಿದಾಗ ನಾಲ್ವರು ನೀರು ಪಾಲಾಗಿದ್ದಾರೆ. ಸ್ನಾನ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋದ ತಂದೆ ಹಾಗೂ ಇವರನ್ನು ರಕ್ಷಿಸಲು ಯತ್ನಿಸಿದ ಸಂಬಂಧಿಕರಿಬ್ಬರು ನಾಪತ್ತೆಯಾಗಿದ್ದಾರೆ. ಸುನೀಲ್ ಕುಮಾರ್ (36), ಪುತ್ರ ಸನ್ನಿ (13), ಕಿರಣ್ (35) ಮತ್ತು ನಂದು (35) ಮೃತರು. ನಾಲ್ವರಲ್ಲಿ ತಂದೆ ಮತ್ತು ಮಗನ ಶವಗಳು ಪತ್ತೆಯಾಗಿದ್ದು, ಇನ್ನಿಬ್ಬರಿಗಾಗಿ ಶೋಧ ನಡೆದಿದೆ. ಸುನೀಲ ಕುಮಾರ್, ಪತ್ನಿ ಕೋಟೇಶ್ವರಿ, ಪುತ್ರ ಸನ್ನಿ ಹಾಗೂ ಅವರ ಸಂಬಂಧಿಕರಾದ ನಂದು, ಶ್ರೀನಾಥ್ ಮತ್ತು ಕಿರಣ್ ಜೊತೆ ಹೈದರಾಬಾದ್‌ನಿಂದ ಬೇಸಿಗೆ ರಜೆ ಕಳೆಯಲು ಬಾಪಟ್ಲಕ್ಕೆ ಬಂದಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ.
ಕೊಳದಲ್ಲಿ ಮೂವರು ಮಕ್ಕಳ ಶವಗಳು ಪತ್ತೆ: ಜಾರ್ಖಂಡ್ನ ಬೊಕಾರೊ ಜಿಲ್ಲೆಯ ಪೇಟರ್‌ವಾರ್‌ನಲ್ಲಿರುವ ಬಿಶೇಶ್ವರ್ ಧಾಮ್ ದೇವಾಲಯದ ಕೊಳದಲ್ಲಿ ಮೂರು ಮಕ್ಕಳ ಶವಗಳು ಪತ್ತೆಯಾಗಿವೆ. ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮಕ್ಕಳು ಬುಧವಾರ ಮಧ್ಯಾಹ್ನ ಮನೆಯಿಂದ ಹೊರ ಬಂದಿದ್ದರು. ಮೃತ ಮೂವರು ಅಪ್ರಾಪ್ತರೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಗುರುವಾರ ಬೆಳಿಗ್ಗೆ ಕೊಳದಲ್ಲಿ ಮಕ್ಕಳ ಮೃತದೇಹಗಳು ತೇಲುತ್ತಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಕುಟುಂಬಸ್ಥರು ಪೇಟವಾರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ದುರಂತ: ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಬಂದ ಮೂವರು ಸಾವನ್ನಪ್ಪಿದ ಘಟನೆ ರಾಜಸ್ತಾನದ ಭರತ್‌ಪುರ ಜಿಲ್ಲೆಯ ಲಖನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗ್ಲಾದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಆಕಾಶ್ (25), ಕರಣ್ (25) ಮತ್ತು ಟಿಕಮ್ ಚಂದ್ ಅಲಿಯಾಸ್ ಭೋಲು ಮೃತಪಟ್ಟವರು. ಅವರನ್ನು ರಕ್ಷಿಸಲು ಬಂದ ಇಂದರ್ ಸಿಂಗ್ ಮತ್ತು ನರೇಶ್ ಇಬ್ಬರು ಪ್ರಜ್ಞೆ ತಪ್ಪಿದ್ದರಿಂದ ಅವರನ್ನು ಆರ್‌ಬಿಎಂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮೂವರ ಮೃತದೇಹಗಳನ್ನು ಆರ್‌ಬಿಎಂ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಇದನ್ನೂ ಓದಿ:ಹಾವೇರಿಯಲ್ಲಿ ಹೆಚ್ಚಿದ ಡೆಂಗ್ಯೂ, 14 ವರ್ಷದೊಳಗಿನ ಮಕ್ಕಳಿಗೆ ಬಾಧೆ; ಸುರಕ್ಷತೆಗೆ ವೈದ್ಯರ ಸಲಹೆ - Dengue Cases