ಕರ್ನಾಟಕ

karnataka

ETV Bharat / bharat

1 ಲೋಕಸಭೆ, 2 ವಿಧಾನಸಭಾ ಕ್ಷೇತ್ರ ಖಾಲಿ: ಕೇರಳದಲ್ಲಿ ಮತ್ತೆ ರಂಗೇರಲಿದೆ ಚುನಾವಣಾ ರಾಜಕೀಯ - By elections in Kerala - BY ELECTIONS IN KERALA

ಕೇರಳದ ಒಂದು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳು ಖಾಲಿ ಆಗಿರುವುದರಿಂದ ಈ ಕ್ಷೇತ್ರಗಳಿಗೆ ಶೀಘ್ರದಲ್ಲೇ ಉಪಚುನಾವಣೆ ನಡೆಯಲಿದೆ.

ರಾಹುಲ್ ಗಾಂಧಿ ಚುನಾವಣಾ ಪ್ರಚಾರದ ಒಂದು ದೃಶ್ಯ
ರಾಹುಲ್ ಗಾಂಧಿ ಚುನಾವಣಾ ಪ್ರಚಾರದ ಒಂದು ದೃಶ್ಯ (IANS)

By IANS

Published : Jun 18, 2024, 12:40 PM IST

ತಿರುವನಂತಪುರಂ : ಕೇರಳದ ವಯನಾಡು ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡಲು ರಾಹುಲ್ ಗಾಂಧಿ ನಿರ್ಧರಿಸಿದ ಬಳಿಕ ಕೇರಳದಲ್ಲಿ ಸದ್ಯ ಒಂದು ಲೋಕಸಭೆ ಮತ್ತು ಎರಡು ವಿಧಾನಸಭಾ ಸ್ಥಾನಗಳು ಖಾಲಿಯಾಗಲಿವೆ. ಭಾರತದ ಚುನಾವಣಾ ಆಯೋಗದ ನಿರ್ಧಾರದ ಬಳಿಕ ಈ ಮೂರು ಸ್ಥಾನಗಳಿಗಾಗಿ ಮತ್ತೆ ಚುನಾವಣೆ ನಡೆಯಲಿವೆ.

ವಯನಾಡ್ ಕ್ಷೇತ್ರ ಬಿಟ್ಟು ಕೊಟ್ಟಿರುವ ಹಾಲಿ ಸಂಸದ ರಾಹುಲ್ ಗಾಂಧಿ, ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸೋಮವಾರ ನಿರ್ಧರಿಸಿದ್ದಾರೆ.

ಫಲಿತಾಂಶ ಪ್ರಿಯಾಂಕಾ ಗಾಂಧಿ ಅವರ ಪರವಾಗಿಯೇ ಇರಲಿದೆ ಎಂದು ರಾಜಕೀಯ ಪಂಡಿತರು ಊಹಿಸಿದ್ದು, 2019 ರಲ್ಲಿ ಸಹೋದರ ರಾಹುಲ್ ಗಾಂಧಿ ಪಡೆದಿದ್ದ 4.30 ಲಕ್ಷ ಮತಗಳ ಲೀಡ್​ ಅನ್ನು ಅವರು ದಾಟಲಿದ್ದಾರೆಯೇ ಎಂಬುದು ಮಾತ್ರ ಕುತೂಹಲದ ವಿಷಯವಾಗಲಿದೆ. 2024ರ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ, ಈ ಬಾರಿ ರಾಹುಲ್ ಗಾಂಧಿ ಅವರ ಗೆಲುವಿನ ಅಂತರ 3.6 ಲಕ್ಷ ಮತಗಳಿಗೆ ಇಳಿದಿದೆ.

ವಯನಾಡ್​ ಲೋಕಸಭಾ ಕ್ಷೇತ್ರದ ಹೊರತಾಗಿ, ಪಾಲಕ್ಕಾಡ್ ಮತ್ತು ತ್ರಿಶೂರ್ ಜಿಲ್ಲೆಯ ಚೆಲಕ್ಕರ ವಿಧಾನಸಭಾ ಕ್ಷೇತ್ರಗಳಿಗೆ ಕೂಡ ಚುನಾವಣೆ ನಡೆಯಬೇಕಿದೆ. ವಡಕರಾ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿದ ನಂತರ ಪಾಲಕ್ಕಾಡ್​ನ ಕಾಂಗ್ರೆಸ್​ನ ಹಾಲಿ ಶಾಸಕ ಶಫಿ ಪರಂಬಿಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಚೆಲಕ್ಕರದಲ್ಲಿ ಹಾಲಿ ವಿಧಾನಸಭಾ ಸದಸ್ಯ ಮತ್ತು ಸಿಪಿಐ (ಎಂ) ನ ರಾಜ್ಯ ಎಸ್​ಸಿ, ಎಸ್ಟಿ ಖಾತೆ ಸಚಿವ ಕೆ ರಾಧಾಕೃಷ್ಣನ್ ಅವರು ಅಲತೂರ್ ಸ್ಥಾನದಿಂದ ಲೋಕಸಭೆಗೆ ಆಯ್ಕೆಯಾದ ನಂತರ ತಮ್ಮ ಸ್ಥಾನವನ್ನು ತ್ಯಜಿಸಲಿದ್ದಾರೆ.

ಹಿಂದಿನ ಎಲ್ಲ ಚುನಾವಣೆಗಳಂತೆ ಈ ಬಾರಿಯೂ ಪಾಲಕ್ಕಾಡ್ ಚುನಾವಣೆ ಕಾಂಗ್ರೆಸ್​ಗಿಂತ ಬಿಜೆಪಿ ಮತ್ತು ಸಿಪಿಐ (ಎಂ) ಗೆ ಹೆಚ್ಚು ನಿರ್ಣಾಯಕವಾಗಲಿದೆ. ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ 2021 ರ ವಿಧಾನಸಭಾ ಚುನಾವಣೆಯಲ್ಲಿ ಖ್ಯಾತ ಮೆಟ್ರೊ ರೈಲ್ವೆ ಎಂಜಿನಿಯರ್ ಇ. ಶ್ರೀಧರನ್ ಅವರು ಪರಂಬಿಲ್​ಗೆ ಕಠಿಣ ಪೈಪೋಟಿ ನೀಡಿದ್ದರು. ಶ್ರೀಧರನ್ ಪರಂಬಿಲ್ ಎದುರು ಕೇವಲ 3 ಸಾವಿರ ಮತಗಳಿಂದ ಸೋತಿದ್ದರು.

ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಸುರೇಶ್ ಗೋಪಿ ಭರ್ಜರಿ ಗೆಲುವು ಸಾಧಿಸಿ ರಾಜ್ಯದಿಂದ ಮೊದಲ ಬಾರಿಗೆ ಲೋಕಸಭೆಯಲ್ಲಿ ಖಾತೆ ತೆರೆದ ನಂತರ, ಬಿಜೆಪಿ 140 ಸದಸ್ಯರ ವಿಧಾನಸಭೆಯಲ್ಲೂ ತನ್ನ ಖಾತೆಯನ್ನು ತೆರೆಯುವ ನಿರೀಕ್ಷೆಯಲ್ಲಿದೆ. ಹೀಗಾಗಿ ಪಕ್ಷವು ಉತ್ತಮ ಅಭ್ಯರ್ಥಿಯನ್ನು ಹುಡುಕಲು ಪ್ರಾರಂಭಿಸಿದೆ.

ಸಿಪಿಐ (ಎಂ) ಗೆ ಚೆಲಕ್ಕರದಲ್ಲಿನ ಹೋರಾಟವು ಬಹಳ ನಿರ್ಣಾಯಕವಾಗಿದೆ. ಇಲ್ಲಿ ಸೋತರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮತ್ತೊಂದು ಹಿನ್ನಡೆ ಆದಂತಾಗುವುದರಿಂದ ಈ ಕ್ಷೇತ್ರದಲ್ಲಿ ಸಿಪಿಐ (ಎಂ) ಗೆ ಗೆಲುವು ಅನಿವಾರ್ಯವಾಗಿದೆ. ಅಲತೂರ್ ಲೋಕಸಭಾ ಕ್ಷೇತ್ರದಲ್ಲಿ ರಾಧಾಕೃಷ್ಣನ್ ವಿರುದ್ಧ ಸೋತಿದ್ದ ರೆಮ್ಯಾ ಹರಿದಾಸ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುವ ಸಾಧ್ಯತೆ ಇದೆ. ಏತನ್ಮಧ್ಯೆ ಚುನಾವಣಾ ಅಯೋಗವು ಉಪಚುನಾವಣೆಯ ದಿನಾಂಕಗಳನ್ನು ಯಾವಾಗ ಘೋಷಿಸಲಿದೆ ಎಂಬ ಕುತೂಹಲ ಮೂಡಿದೆ. ಜೊತೆಗೆ ರಾಜಕೀಯ ಪಕ್ಷಗಳು ಮತ್ತೆ ಪ್ರಚಾರಕ್ಕಿಳಿಯಲು ತಯಾರಿ ಮಾಡಿಕೊಳ್ಳುತ್ತಿವೆ.

ಇದನ್ನೂ ಓದಿ : ಮಾನ್ಸೂನ್ ಮುಂದುವರಿಕೆಗೆ ಪರಿಸ್ಥಿತಿ ಅನುಕೂಲಕರ: 4 ದಿನ ಹಲವೆಡೆ ಭಾರಿ ಮಳೆ ಮುನ್ಸೂಚನೆ - Monsoon to Advance Further

ABOUT THE AUTHOR

...view details