ಕರ್ನಾಟಕ

karnataka

ವಿಶ್ವಕಪ್‌ ಕ್ರಿಕೆಟ್‌: ಆಸ್ಟ್ರೇಲಿಯಾಕ್ಕೆ ಟ್ರಾವಿಸ್ ಹೆಡ್ ಇನ್​; ಶ್ರೀಲಂಕಾ ನಾಯಕ ದಸುನ್ ಶನಕ ಔಟ್​

By ETV Bharat Karnataka Team

Published : Oct 15, 2023, 7:24 PM IST

ವಿಶ್ವಕಪ್​ಗೂ ಮುನ್ನ ಗಾಯಕ್ಕೆ ತುತ್ತಾದ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಚೇತರಿಸಿಕೊಂಡು ತಂಡ ಸೇರಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಶ್ರೀಲಂಕಾ ನಾಯಕ ದಸುನ್ ಶನಕ ಅವರಿಗೆ ಮುಂದಿನ ಪಂದ್ಯಗಳು ಮಿಸ್ ಆಗಲಿವೆ.

Travis Head - Dasun Shanaka
Travis Head - Dasun Shanaka

ಹೈದರಾಬಾದ್​​ (ತೆಲಂಗಾಣ): ವಿಶ್ವಕಪ್​ ಕ್ರಿಕೆಟ್ ಟೂರ್ನಿಯ ಸಂದರ್ಭದಲ್ಲಿ ಪ್ರಮುಖ ಆಟಗಾರರು ಗಾಯಕ್ಕೆ ತುತ್ತಾದರೆ, ಅದು ತಂಡಕ್ಕೆ ದೊಡ್ಡ ನಷ್ಟವಾದಂತೆ. ವಿಶ್ವ ಕ್ರೀಡಾ ವೇದಿಕೆಯಲ್ಲಿ ಇದೀಗ ಇಬ್ಬರು ನಾಯಕರು ಗಾಯದಿಂದ ತಂಡ ತೊರೆಯಬೇಕಾಗಿದೆ. ನ್ಯೂಜಿಲೆಂಡ್​ ತಂಡದ ನಾಯಕ ಕೇನ್​ ವಿಲಿಯಮ್ಸನ್​ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಹೆಬ್ಬೆರಳ ಗಾಯದಿಂದಾಗಿ ಹೊರನಡೆದರೆ, ಶ್ರೀಲಂಕಾ ನಾಯಕ ದಸುನ್ ಶನಕ ಪಾಕಿಸ್ತಾನದ ಪಂದ್ಯದಲ್ಲಿ ಗಾಯಕ್ಕೆ ತುತ್ತಾದರು.

ಇನ್ನೊಂದೆಡೆ, ಆಸ್ಟ್ರೇಲಿಯಾಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ವಿಶ್ವಕಪ್​ಗೂ ಮುನ್ನ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಈ ಸಂದರ್ಭದಲ್ಲಿ ಗಾಯಗೊಂಡಿದ್ದ ಟ್ರಾವಿಸ್ ಹೆಡ್ ಚೇತರಿಸಿಕೊಂಡಿದ್ದು ತಂಡವನ್ನು ಶೀಘ್ರದಲ್ಲಿ ಸೇರಿಕೊಳ್ಳಲಿದ್ದಾರೆ.

ವೇಗವಾಗಿ ಚೇತರಿಸಿಕೊಂಡ ಹೆಡ್​:ಟ್ರಾವಿಸ್ ಹೆಡ್ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ತಂಡ ಸೇರಲು ಸಜ್ಜಾಗಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿಯ ವೇಳೆ ಎಡಗೈ ಮೂಳೆ ಮುರಿತಕ್ಕೆ ಒಳಗಾಗಿದ್ದರು. ವಿಶ್ವಕಪ್​ಗೆ ಪ್ರಕಟಿಸಿದ 15 ಸದಸ್ಯರ ತಂಡದಲ್ಲಿ ಹೆಡ್ ಅವರನ್ನು ಹೆಸರಿಸಲಾಗಿತ್ತು. ಮುಂದಿನ ತಿಂಗಳ ವೇಳೆಗೆ ತಂಡ ಸೇರಿಕೊಳ್ಳುವ ನಿರೀಕ್ಷೆ ಇತ್ತು. ಆದರೆ ವೇಗವಾಗಿ ಚೇತರಿಸಿಕೊಂಡಿದ್ದಾರೆ.

ಇದೇ ಗುರುವಾರ ಅವರು ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಆಸ್ಟ್ರೇಲಿಯಾ ತನ್ನ ನಾಲ್ಕನೇ ವಿಶ್ವಕಪ್ ಪಂದ್ಯವನ್ನು (ಅ.20) ಬೆಂಗಳೂರು ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಆಡಲಿದೆ. ಈ ಪಂದ್ಯದ ವೇಳೆಗೆ ತಂಡಕ್ಕೆ ಹೆಡ್​ ಸೇರ್ಪಡೆ ಆಗಿದ್ದರೂ ಮೈದಾನಕ್ಕಿಳಿಯುವುದು ಅನುಮಾನ. ಅಕ್ಟೋಬರ್ 25 ರಂದು ದೆಹಲಿಯಲ್ಲಿ ನೆದರ್ಲೆಂಡ್ ಪಂದ್ಯಕ್ಕೆ ಮರಳಬಹುದು ಎನ್ನಲಾಗಿದೆ.

ಪಾಕ್​ ಪಂದ್ಯದಲ್ಲಿ ಗಾಯಗೊಂಡ ಶನಕ: ಮಂಗಳವಾರ ನಡೆದ ಪಾಕಿಸ್ತಾನ-ಶ್ರೀಲಂಕಾ ಪಂದ್ಯದ ವೇಳೆ ಶನಕಾ ಕ್ವಾಡ್ ಗಾಯಕ್ಕೆ ಒಳಗಾಗಿದ್ದರು. ಸ್ಕ್ಯಾನ್‌ ನಂತರ ಕನಿಷ್ಠ ಮೂರು ವಾರಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಶ್ರೀಲಂಕಾ ತನ್ನ ತಂಡದಲ್ಲಿ ಶನಕಾ ಬದಲಿಗೆ ಆಲ್‌ರೌಂಡರ್ ಚಾಮಿಕಾ ಕರುಣಾರತ್ನೆ ಅವರನ್ನು ಆಯ್ಕೆ ಮಾಡಿಕೊಂಡಿದೆ. ಕರುಣಾರತ್ನೆ ಮೀಸಲು ಆಟಗಾರನಾಗಿ ತಂಡದೊಂದಿಗೆ ಪ್ರಯಾಣಿಸಿದ್ದರಿಂದ ಅವರು ಭಾರತದಲ್ಲೇ ಇದ್ದಾರೆ. ಸೋಮವಾರ ಲಕ್ನೋದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುವ ಪಂದ್ಯದಲ್ಲಿ ಮೈದಾನಕ್ಕಿಳಿಯುವ ನಿರೀಕ್ಷೆ ಇದೆ.

27 ವರ್ಷದ ಚಾಮಿಕಾ ಕರುಣಾರತ್ನೆ ಏಪ್ರಿಲ್ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20ಯಲ್ಲಿ ಕಾಣಿಸಿಕೊಂಡಿದ್ದು ಕೊನೆ. ನಂತರ ಶ್ರೀಲಂಕಾ ಪರ ಆಡಿಲ್ಲ. ಆದರೆ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿದ ಅನುಭವ ಇರುವ ಅವರು ಸಿಂಹಳೀಯರಿಗಾಗಿ 60ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇನ್ ಫಾರ್ಮ್ ಬ್ಯಾಟರ್ ಕುಸಾಲ್ ಮೆಂಡಿಸ್ ಶ್ರೀಲಂಕಾ ತಂಡದ ಉಪನಾಯಕನಾಗಿದ್ದು, ಶನಕಾ ಅನುಪಸ್ಥಿತಿಯಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ:ವಿಶ್ವಕಪ್​ನಲ್ಲಿ ಭಾರತಕ್ಕೆ ಹ್ಯಾಟ್ರಿಕ್​ ಗೆಲುವು: ಮುಂದಿನ ಸವಾಲೇನು? ಈ ತಂಡಗಳನ್ನು ಮಣಿಸುವುದೇ ರೋಹಿತ್‌ ಟೀಂ?

ABOUT THE AUTHOR

...view details