ಹರಾರೆ (ಜಿಂಬಾಬ್ವೆ): ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಇಂದು ನಡೆದ ಮೂರನೇ ಟಿ20 ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ವಿರುದ್ಧ ಶುಭ್ಮನ್ ಗಿಲ್ ನೇತೃತ್ವದ ಭಾರತದ ಯುವ ಪಡೆ 23 ರನ್ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಭಾರತವು 2-1 ಅಂತರದಿಂದ ಮುನ್ನಡೆ ಸಾಧಿಸಿದೆ.
🔙 to 🔙 wins in Harare 🙌
— BCCI (@BCCI) July 10, 2024
A 23-run victory in the 3rd T20I as #TeamIndia now lead the series 2⃣-1⃣ 👏👏
Scorecard ▶️ https://t.co/FiBMpdYQbc#ZIMvIND pic.twitter.com/ZXUBq414bI
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು, 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 182 ರನ್ಗಳನ್ನು ಗಳಿಸಿತು. ಟೀಂ ಇಂಡಿಯಾ ನೀಡಿದ್ದ 183 ಸ್ಪರ್ಧಾತ್ಮಕ ಮೊತ್ತದ ಬೆನ್ನಟ್ಟಿದ್ದ ಜಿಂಬಾಬ್ವೆ, ಆರು ವಿಕೆಟ್ ನಷ್ಟಕ್ಕೆ ಕೇವಲ 159 ರನ್ ಗಳಿಸಲು ಮಾತ್ರ ಶಕ್ತವಾಯಿತು.
ನಾಯಕ ಶುಭ್ಮನ್ ಗಿಲ್ ಆಕರ್ಷಕ ಅರ್ಧಶತಕ, ಯಶಸ್ವಿ ಜೈಸ್ವಾಲ್ ಹಾಗೂ ರುತುರಾಜ್ ಗಾಯಕ್ವಾಡ್ ಆಕ್ರಮಣಕಾರಿ ಆಟ ಇಂದಿನ ಪಂದ್ಯಕ್ಕೆ ನೆರವಾಯಿತು. ಜೊತೆಗೆ ವಾಷಿಂಗ್ಟನ್ ಸುಂದರ್, ಅವೇಶ್ ಖಾನ್ ಹಾಗೂ ಖಲೀಲ್ ಅಹ್ಮದ್ ಮಾರಕ ದಾಳಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಇನ್ನಿಂಗ್ಸ್ ಉದ್ದಕ್ಕೂ ಫೀಲ್ಡಿಂಗ್‌ನಲ್ಲಿ ಕಳಪೆಯಾಟ ಆಡಿದ ಜಿಂಬಾಬ್ವೆ, ಹಲವು ಕ್ಯಾಚ್ಗಳನ್ನು ಡ್ರಾಪ್ ಮಾಡಿ ಜೀವದಾನ ಕೊಟ್ಟಿದ್ದು ಸಹ ಭಾರತೀಯರಿಗೆ ಅನುಕೂಲ ಅನ್ನಿಸಿತು.
ನಿರೀಕ್ಷೆಯಂತೆ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ಕ್ರೀಸ್ಗೆ ಇಳಿದ ಭಾರತದ ಯುವ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಉತ್ತಮ ಆರಂಭ ಮಾಡಿದರು. 27 ಎಸೆತ ಎದುರಿಸಿದ ಯಶಸ್ವಿ ಜೈಸ್ವಾಲ್, ಎರಡು ಸಿಕ್ಸ್ ಮತ್ತು ನಾಲ್ಕು ಬೌಂಡರಿ ಸಹಿತ 36 ರನ್ ಗಳಿಸಿದರೆ, 49 ಎಸೆತ ಎದುರಿಸಿದ ಶುಭ್ಮನ್ ಗಿಲ್, ಮೂರು ಸಿಕ್ಸ್ ಮತ್ತು ಏಳು ಬೌಂಡರಿ ಸಹಿತ ಆಕರ್ಷಕ ಅರ್ಧ ಶತಕ (66) ಸಿಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಬಳಿಕ ಬಂದ ಅಭಿಷೇಕ್ ಶರ್ಮಾ ಕೇವಲ 10 ರನ್ ಗಳಿಸಿ ನಿರಾಸೆ ಮೂಡಿಸಿದರು. ರುತುರಾಜ್ ಗಾಯಕ್ವಾಡ್ ಅರ್ಧ ಶಕತ ವಂಚಿತರಾದರು. 28 ಎಸೆದ ಎದುರಿಸಿ ಮೂರು ಸಿಕ್ಸ್ ಮತ್ತು ನಾಲ್ಕು ಬೌಂಡರಿ ಸಿಡಿಸಿದ ರುತುರಾಜ್ ಗಾಯಕ್ವಾಡ್ 49 ರನ್ ಗಳಿಸಿದರು. ಸಂಜು ಸ್ಯಾಮ್ಸನ್ ಮತ್ತು ರಿಂಕು ಸಿಂಗ್ ಔಟ್ ಆಗದೇ ಕ್ರಮವಾಗಿ 12 ಮತ್ತು 1 ರನ್ ಗಳಿಸಿ ತಮ್ಮದೇಯಾದ ಕಾಣಿಕೆ ನೀಡಿದರು. ಜಿಂಬಾಬ್ವೆ ತಂಡದ ಪರ ಮುಜರಬಾನಿ ಮತ್ತು ರಾಝಾ ತಲಾ ಎರಡು ವಿಕೆಟ್ ಪಡೆದರು.
182 ರನ್ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಭಾರತದ ಬಿಗುವಿನ ಬೌಲಿಂಗ್ ದಾಳಿಗೆ ಸಿಲುಕಿ ಮೊದಲ ಓವರ್ನಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆರಂಭಿಕ ವೆಸ್ಲಿ ಮಾಧೆವೆರೆ ಕೇವಲ 1 ರನ್ ಗಳಿಸಿ ಅಭಿಮಾನಿಗಳಿಗೆ ನಿರಾಸಿ ಮೂಡಿಸಿದರು. ಅವರೊಂದಿಗೆ ಕಣಕ್ಕಿಳಿದಿದ್ದ ತಡಿವಾನಾಶೆ ಮರುಮಣಿ 13 ರನ್ ಗಳಿಸಿ ಶಿವಂ ದುಬೆಗೆ ಬಲಿಯಾದರು. ಬಳಿಕ ಬ್ರಿಯಾನ್ ಬೆನೆಟ್ 4 ರನ್ ಗಳಿಸಿ ಬಂದ ದಾರಿಯಲ್ಲೇ ವಾಪಸ್ ಆದರು. 39 ರನ್ ಆಗುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡು ಸೋಲಿನ ಸನಿಹ ತೆರಳಿತು. ಆದರೆ, ಡಿಯೋನ್ ಮೈಯರ್ಸ್ ಮಾತ್ರ ಭಾರತದ ಬೌಲರ್ಗಳನ್ನು ಹೆಚ್ಚು ಹೊತ್ತು ಕಾಡಿದರು. 49 ರನ್ ಎದುರಿಸಿದ ಡಿಯೋನ್, ಒಂದು ಸಿಕ್ಸ್ ಮತ್ತು ಏಳು ಬೌಂಡರಿ ಸಹಿತ 65 ರನ್ ಗಳಿಸಿ ಔಟ್ ಆಗದೇ ಕೊನೆವರೆಗೂ ತಮ್ಮ ಹೋರಾಟ ನಡೆಸಿದರೂ ಫಲ ನೀಡಲಿಲ್ಲ. ಉಳಿದಂತೆ ನಾಯಕ ಸಿಕಂದರ್ ರಜಾ (15), ಜೋನಾಥನ್ ಕ್ಯಾಂಪ್ಬೆಲ್ (1), ಕ್ಲೈವ್ ಮದಂಡೆ (37) ರನ್ ಸಿಡಿಸಿ ತಮ್ಮದೇಯಾದ ಕಾಣಿಕೆ ನೀಡಿದರು. ವೆಲ್ಲಿಂಗ್ಟನ್ ಮಸಕಡ್ಜಾ ಔಟ್ ಆಗದೇ 18 ರನ್ ಗಳಿಸಿದರು.
ಭಾರತ ತಂಡದ ಪರ ವಾಷಿಂಗ್ಟನ್ ಸುಂದರ್ 15 ರನ್ ನೀಡಿ ಮೂರು ವಿಕೆಟ್ ಪಡೆದರೆ, ಅವೇಶ್ ಖಾನ್ ಎರಡು ಮತ್ತು ಖಲೀಲ್ ಅಹ್ಮದ್ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 2ನೇ ಆಟಗಾರ ಆಗ್ತಾರಾ ಜೇಮ್ಸ್ ಆ್ಯಂಡರ್ಸನ್? - JAMES ANDERSON