ನೀವು ಕ್ರೆಡಿಟ್ ಕಾರ್ಡ್ಗಳ ಜಗತ್ತಿಗೆ ಹೊಸಬರಾಗಿರುವಿರಾ? ಈಗಷ್ಟೇ ಹೊಸದಾಗಿ ಕ್ರೆಡಿಟ್ ಕಾರ್ಡ್ ಪಡೆಯಲು ಪ್ರಯತ್ನಿಸುತ್ತಿರುವಿರಾ? ಹಾಗಾದರೆ ನಿಮಗೆ ಸೂಕ್ತವಾದ ಕಾರ್ಡ್ ಆಯ್ಕೆ ಮಾಡಿಕೊಳ್ಳುವುದಕ್ಕಾಗಿ ಮಾರ್ಗದರ್ಶಿ ಸೂತ್ರಗಳು ಇಲ್ಲಿವೆ. ಹೊಸ ಕ್ರೆಡಿಟ್ ಕಾರ್ಡ್ ಬಳಕೆದಾರರಾದ ನೀವು ಗರಿಷ್ಠ ಸವಲತ್ತುಗಳು ಮತ್ತು ರಿಯಾಯಿತಿಗಳನ್ನು ಹೊಂದಿರುವ ರುಪೇ ಕ್ರೆಡಿಟ್ ಕಾರ್ಡ್ ಅನ್ನು ಪರಿಗಣಿಸಬಹುದು. ರುಪೇ ಕ್ರೆಡಿಟ್ ಕಾರ್ಡ್ ಭಾರತದಲ್ಲಿ ಎಲ್ಲ ವಯಸ್ಸಿನ ವ್ಯಕ್ತಿಗಳಿಗೆ ಉತ್ತಮ ಆಯ್ಕೆಯಾಗಿದೆ.
ರುಪೇ ಕ್ರೆಡಿಟ್ ಕಾರ್ಡ್ ಎಂದರೇನು?: ರುಪೇ ಎಂಬುದು ಎನ್ಪಿಸಿಐ (ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ಪರಿಚಯಿಸಿದ ಪಾವತಿ ನೆಟ್ವರ್ಕ್ ಆಗಿದೆ. ಈಗ, ಹಣಕಾಸು ವಹಿವಾಟುಗಳನ್ನು ಸರಳೀಕರಿಸಲು ಮತ್ತು ಈ ಕಾರ್ಡ್ಗಳಿಗೆ ಸಂಬಂಧಿಸಿದ ಪ್ರಯೋಜನಗಳನ್ನು ಹೆಚ್ಚಿಸಲು ಬ್ಯಾಂಕುಗಳು ಈ ನೆಟ್ವರ್ಕ್ ಅನ್ನು ತಮ್ಮ ಕ್ರೆಡಿಟ್ ಕಾರ್ಡ್ಗಳಲ್ಲಿ ಸಂಯೋಜಿಸಿವೆ. ರುಪೇ ಕ್ರೆಡಿಟ್ ಕಾರ್ಡ್ ಎಂಬುದು ವಹಿವಾಟುಗಳನ್ನು ನಡೆಸಲು ವಿವಿಧ ಬ್ಯಾಂಕುಗಳು ನೀಡುವ ಕ್ರೆಡಿಟ್ ಕಾರ್ಡ್ನ ರೂಪಾಂತರವಾಗಿದೆ. ಇದು ಹೆಚ್ಚಿನ ಭದ್ರತೆ ಹೊಂದಿದೆ.
ರುಪೇ ಕ್ರೆಡಿಟ್ ಕಾರ್ಡ್ನ ಪ್ರಯೋಜನಗಳು
1. ಹೆಚ್ಚಿನ ಸುರಕ್ಷತೆ: ಹೆಚ್ಚುವರಿ ಭದ್ರತೆಯ ರುಪೇ ಕ್ರೆಡಿಟ್ ಕಾರ್ಡ್ ಬಳಸುವುದು ಬಹಳ ಸುಲಭವಾಗಿದೆ. ನೀವು ಮಾಡುವ ಪ್ರತಿಯೊಂದು ವಹಿವಾಟಿನ ಸಮಯದಲ್ಲಿಯೂ ನಿಮ್ಮ ಹಣಕಾಸಿನ ವಿವರಗಳು ಸುರಕ್ಷಿತವಾಗಿರುತ್ತವೆ ಮತ್ತು ಪಾವತಿಯನ್ನು ಅತ್ಯಂತ ಸುರಕ್ಷಿತವಾಗಿ ಮಾಡಲಾಗುತ್ತದೆ. ನಿಮ್ಮ ಡೇಟಾ ಮತ್ತು ವಹಿವಾಟುಗಳನ್ನು ರಕ್ಷಿಸಲು ರುಪೇ ಕಾರ್ಡ್ ಇತ್ತೀಚಿನ ತಂತ್ರಜ್ಞಾನವನ್ನು ಒಳಗೊಂಡಿದೆ. ನೀವು ಆನ್ ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ನಿಮ್ಮ ಕಾರ್ಡ್ ಬಳಸುವಾಗ ಈ ವೈಶಿಷ್ಟ್ಯ ಅಗತ್ಯವಾಗಿ ಬೇಕಾಗುತ್ತದೆ.
2. ರಿವಾರ್ಡ್ಗಳು ಮತ್ತು ಆಫರ್ಗಳು: ರುಪೇ ಕ್ರೆಡಿಟ್ ಕಾರ್ಡ್ ಪಾಲುದಾರ ಮಳಿಗೆಗಳು ಮತ್ತು ಆನ್ ಲೈನ್ ವ್ಯಾಪಾರಿಗಳಲ್ಲಿ ವಹಿವಾಟು ನಡೆಸುವಾಗ ವಿಶೇಷ ಸವಲತ್ತುಗಳನ್ನು ನೀಡುತ್ತದೆ. ಅನೇಕ ಬ್ಯಾಂಕುಗಳು ಇಂಧನ, ಆನ್ ಲೈನ್ ಶಾಪಿಂಗ್, ದಿನಸಿ, ಚಲನಚಿತ್ರಗಳು ಮತ್ತು ಇನ್ನಿತರ ವಹಿವಾಟುಗಳಿಗೆ ಹೆಚ್ಚಿನ ರಿವಾರ್ಡ್ ಪಾಯಿಂಟ್ಗಳನ್ನು ನೀಡುತ್ತವೆ. ಬಳಕೆದಾರರು ತಮ್ಮ ಕ್ರೆಡಿಟ್ ಕಾರ್ಡ್ ಪ್ರಯೋಜನಗಳನ್ನು ಹೆಚ್ಚಿಸಲು ಅಂತಹ ವೈಶಿಷ್ಟ್ಯಗಳ ಲಾಭವನ್ನು ಪಡೆಯಬಹುದು.
3. ಎಲ್ಲ ಕಡೆ ಸ್ವೀಕೃತಿ : ಹಣಕಾಸು ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ರೀತಿಯ ಕ್ರೆಡಿಟ್ ಕಾರ್ಡ್ ಗಳಿಗೆ ಹೋಲಿಸಿದರೆ ರುಪೇ ಕ್ರೆಡಿಟ್ ಕಾರ್ಡ್ಗಳು ಬಹುತೇಕ ಎಲ್ಲೆಡೆ ಸ್ವೀಕೃತಿಯನ್ನು ಹೊಂದಿವೆ. ಈ ಕಾರ್ಡ್ಗಳು ದೇಶೀಯ ಹಣಕಾಸು ಉತ್ಪನ್ನವಾಗಿರುವುದರಿಂದ ಭಾರತದಾದ್ಯಂತ ವ್ಯಾಪಕವಾಗಿ ಸ್ವೀಕರಿಸಲ್ಪಡುತ್ತವೆ.
4. ಕಡಿಮೆ ವೆಚ್ಚ: ವೀಸಾ ಮತ್ತು ಮಾಸ್ಟರ್ ಕಾರ್ಡ್ನಂಥ ಅಂತಾರಾಷ್ಟ್ರೀಯ ಕಾರ್ಡ್ಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚದ ರುಪೇ ಕ್ರೆಡಿಟ್ ಕಾರ್ಡ್ಗಳ ವಹಿವಾಟು ಶುಲ್ಕಕಡಿಮೆಯಾಗಿರುತ್ತದೆ. ಎಲೆಕ್ಟ್ರಾನಿಕ್ ಪಾವತಿಗಳ ಮೂಲಕ ಪ್ರತಿ ಖರೀದಿಯಲ್ಲಿ ಹಣ ಉಳಿಸಲು ರುಪೇ ಕಾರ್ಡ್ ಸಹಾಯ ಮಾಡುತ್ತದೆ.
ರುಪೇ ಕ್ರೆಡಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು
- ಅರ್ಜಿದಾರರು 21 ರಿಂದ 65 ವರ್ಷ ವಯಸ್ಸಿನವರಾಗಿರಬೇಕು.
- ಅರ್ಜಿದಾರರು ಭಾರತೀಯ ಪ್ರಜೆಗಳಾಗಿರಬೇಕು.
- ಅವರು ನಿಯಮಿತ ಆದಾಯ ಹೊಂದಿರಬೇಕು. ಇದು ಬ್ಯಾಂಕ್ಗಳನ್ನು ಆಧರಿಸಿ ಬದಲಾಗುತ್ತದೆ.
ಮೊದಲ ಬಾರಿಗೆ ಬಳಕೆದಾರರಾಗಿ ಅರ್ಜಿ ಸಲ್ಲಿಸುವ ಮೊದಲು ನೆನಪಿನಲ್ಲಿಡಬೇಕಾದ ವಿಷಯಗಳು:
1. ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ತಿಳಿದುಕೊಳ್ಳಿ : ಅರ್ಜಿ ಸಲ್ಲಿಸುವ ಮೊದಲು, ನಿಮ್ಮ ಆರ್ಥಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ನಿಮ್ಮ ಆದಾಯ, ವೆಚ್ಚಗಳು ಮತ್ತು ಕ್ರೆಡಿಟ್ ಇತಿಹಾಸವನ್ನು ಮೌಲ್ಯಮಾಪನ ಮಾಡಿ. ಈ ಮೌಲ್ಯಮಾಪನವು ನೀವು ಕ್ರೆಡಿಟ್ ಕಾರ್ಡ್ ಅನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬಹುದೇ ಎಂದು ನಿರ್ಧರಿಸಲು ನಿಮಗೆ ಸಹಾಯ ಮಾಡುತ್ತದೆ. ಅತಿಯಾದ ಖರ್ಚು ಮತ್ತು ನೀವು ಮರುಪಾವತಿಸಲು ಸಾಧ್ಯವಾಗದಷ್ಟು ಸಾಲ ಮಾಡಿಕೊಳ್ಳುವ ಅಪಾಯವನ್ನು ಇದರಿಂದ ತಪ್ಪಿಸಬಹುದು.
2. ವಿವಿಧ ಕಾರ್ಡ್ಗಳ ಬಗ್ಗೆ ಪರಿಶೀಲಿಸಿ: ಮಾರುಕಟ್ಟೆಯಲ್ಲಿ ಲಭ್ಯ ಇರುವ ವಿವಿಧ ಕ್ರೆಡಿಟ್ ಕಾರ್ಡ್ ಆಯ್ಕೆಗಳನ್ನು ಸಂಶೋಧಿಸಲು ಮತ್ತು ಹೋಲಿಸಲು ಸಮಯ ತೆಗೆದುಕೊಳ್ಳಿ. ರಿವಾರ್ಡ್ ಪಾಯಿಂಟ್ಗಳು, ಬಡ್ಡಿದರ, ವಾರ್ಷಿಕ ಶುಲ್ಕ ಮತ್ತು ವಿವಿಧ ಕಾರ್ಡ್ಗಳು ನೀಡುವ ಹೆಚ್ಚುವರಿ ಸವಲತ್ತುಗಳನ್ನು ನೋಡಿ. ಪ್ರತಿ ಕಾರ್ಡ್ ನ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ನಿಮ್ಮ ಖರ್ಚು ಮಾಡುವ ಅಭ್ಯಾಸ, ಜೀವನಶೈಲಿ ಮತ್ತು ಆರ್ಥಿಕ ಗುರಿಗಳಿಗೆ ಸೂಕ್ತವಾದದನ್ನು ನೀವು ಆಯ್ಕೆ ಮಾಡಬಹುದು.
3. ನಿಯಮಗಳು ಮತ್ತು ಷರತ್ತುಗಳನ್ನು ಅರ್ಥಮಾಡಿಕೊಳ್ಳಿ: ಕಾರ್ಡ್ಗಾಗಿ ಅರ್ಜಿ ಸಲ್ಲಿಸುವ ಮೊದಲು, ಕ್ರೆಡಿಟ್ ಕಾರ್ಡ್ಗೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಓದುವುದು ಮತ್ತು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಬಡ್ಡಿದರಗಳು, ಶುಲ್ಕಗಳು, ಗ್ರೇಸ್ ಅವಧಿಗಳು ಮತ್ತು ರಿವಾರ್ಡ್ ಆಫರ್ಗಳ ಬಗ್ಗೆ ವಿಚಾರಿಸಿ.
ಇದನ್ನೂ ಓದಿ : ಸಣ್ಣ ನಗರಗಳ ಶೇ 65ರಷ್ಟು ಗ್ರಾಹಕರಿಂದ ಡಿಜಿಟಲ್ ಪಾವತಿ ಬಳಕೆ: ಮುಂಚೂಣಿಯಲ್ಲಿ ಜೆನ್ ಎಕ್ಸ್ ಪೀಳಿಗೆ - Digital Payments in India