ಹೈದರಾಬಾದ್: ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿ ಆಯ್ಕೆಯಾಗಿದೆ. ಒಂದು ತಿಂಗಳಿಂದ ಹರಿದಾಡುತ್ತಿದ್ದ ಸುದ್ದಿ ನಿಜವಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂತಿಮವಾಗಿ ಗೌತಮ್ ಗಂಭೀರ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಿಸಿ ಘೋಷಿಸಿದೆ. ಇದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಿಸಿದ್ದಾರೆ.
"ಭಾರತೀಯ ಕ್ರಿಕೆಟ್ ತಂಡದ ಹೊಸ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರನ್ನು ಸ್ವಾಗತಿಸಲು ನಾನು ಸಂತೋಷಪಡುತ್ತೇನೆ. ಆಧುನಿಕ ಕ್ರಿಕೆಟ್ ವೇಗವಾಗಿ ವಿಕಸನಗೊಂಡಿದೆ. ಗೌತಮ್ ಈ ಬದಲಾವಣೆಗಳನ್ನು ತೀರಾ ಹತ್ತಿರದಿಂದ ಕಂಡಿದ್ದಾರೆ. ಗಂಭೀರ್ ತಮ್ಮ ವೃತ್ತಿಜೀವನದಲ್ಲಿ ವಿವಿಧ ಆಯಾಮಗಳಲ್ಲಿ ಕೆಲಸ ಮಾಡಿದ್ದಾರೆ. ಟೀಮ್ ಇಂಡಿಯಾದ ಕೋಚ್ ಆಗಿ ಯಶಸ್ವಿಯಾಗಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಅವರು ಬರೆದುಕೊಂಡಿದ್ದಾರೆ.
It is with immense pleasure that I welcome Mr @GautamGambhir as the new Head Coach of the Indian Cricket Team. Modern-day cricket has evolved rapidly, and Gautam has witnessed this changing landscape up close. Having endured the grind and excelled in various roles throughout his… pic.twitter.com/bvXyP47kqJ
— Jay Shah (@JayShah) July 9, 2024
ಕೋಚ್ ಹುದ್ದೆಯನ್ನು ಸ್ಪಷ್ಟ ದೃಷ್ಟಿಕೋನದಲ್ಲಿ ಅವರು ಕೊಂಡೊಯ್ಯುವ ಅರ್ಹ ವ್ಯಕ್ತಿಯಾಗಿದ್ದಾರೆ. ಕೋಚಿಂಗ್ ಹುದ್ದೆಗೆ ಅವರು ಪರಿಪೂರ್ಣ ಆಯ್ಕೆಯಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶ್ರೀಲಂಕಾ ಸರಣಿಗೆ ತಂಡ ಸೇರಲಿರುವ ಗಂಭೀರ್; ಈ ತಿಂಗಳಲ್ಲಿ ನಡೆಯುವ ಶ್ರೀಲಂಕಾ ವಿರುದ್ಧದ ಸರಣಿಯಿಂದ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಗಂಭೀರ್ ಅವರ ಮುಂಗಾಳತ್ವದಲ್ಲಿ ಭಾರತ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಸಹಾಯಕ ಕೋಚ್ ಆಯ್ಕೆ ವಿಚಾರದಲ್ಲೂ ಗಂಭೀರ್‌ಗೆ ಬಿಸಿಸಿಐ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎಂದು ತಿಳಿದುಬಂದಿದೆ. ಜುಲೈ 27 ರಿಂದ ಶ್ರೀಲಂಕಾ ಎದುರು ಭಾರತ 3 ಟಿ-20 ಮತ್ತು 3 ಏಕದಿನ ಪಂದ್ಯಗಳನ್ನು ಆಡಲಿದೆ.
Many thanks for your extremely kind words and constant support @JayShah bhai. Elated to be a part of this journey! The entire team together will strive for excellence and newer heights. https://t.co/BgAbTwN59u
— Gautam Gambhir (@GautamGambhir) July 9, 2024
ಭರವಸೆ ಈಡೇರಿಸುವ ಪ್ರಯತ್ನ ಮಾಡುವೆ: ಕೋಚ್ ಆಗಿ ಅಧಿಕೃತ ಘೋಷಣೆ ಹೊರಬಿದ್ದ ಬಳಿಕ ಪ್ರತಿಕ್ರಿಯಿಸಿರುವ ಗಂಭೀರ್, ಭಾರತ ನನ್ನ ಗುರುತಾಗಿದೆ. ನನ್ನ ದೇಶಕ್ಕೆ ಸೇವೆ ಸಲ್ಲಿಸುವುದು ಜೀವನದ ಶ್ರೇಷ್ಠ ಗೌರವವಾಗಿದೆ. ಈಗ ನನ್ನ ಪಾತ್ರ ವಿಭಿನ್ನವಾಗಿರಲಿದೆ. ಇದಕ್ಕೆ ನಾನು ಹೆಮ್ಮೆಪಡುವೆ. ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡಿಸುವುದು ನನ್ನ ಧ್ಯೇಯ. 140 ಕೋಟಿ ಭಾರತೀಯರ ಭರವಸೆಯನ್ನು ಕನಸುಗಳನ್ನು ನನಸಾಗಿಸಲು ನಾನು ಪ್ರಯತ್ನ ಪಡುವೆ ಎಂದಿದ್ದಾರೆ.
ಗಂಭೀರ್ ವಿದಾಯ ವಿಡಿಯೋ: ಟೀಂ ಇಂಡಿಯಾ ಕೋಚ್‌ಗೆ ಅರ್ಜಿ ಸಲ್ಲಿಸುವ ಮುನ್ನ ಗೌತಮ್ ಗಂಭೀರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿದ್ದರು. ಕೆಕೆಆರ್ 2024ರ ಐಪಿಎಲ್ ಪ್ರಶಸ್ತಿಯನ್ನೂ ಗೆದ್ದಿತ್ತು. ಇತ್ತೀಚೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಗಂಭೀರ್‌ಗೆ ಅದ್ಧೂರಿ ವಿದಾಯ ನೀಡಿತ್ತು.
ಇದನ್ನೂ ಓದಿ: ದ್ರಾವಿಡ್ ಉತ್ತರಾಧಿಕಾರಿಯಾಗಿ ಗೌತಮ್ ಗಂಭೀರ್ ಆಯ್ಕೆ?: ಬಿಸಿಸಿಐನಿಂದ ಘೋಷಣೆಯೊಂದೇ ಬಾಕಿ - team India Head Coach