ಉಡುಪಿ: ಇಲ್ಲಿನ ಮಣಿಪಾಲದ ಅನಂತ ನಗರ ಹಾಸ್ಟೆಲ್ನ ಕಿಟಕಿ ಮೂಲಕ ಕೈ ಹಾಕಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿಯ ನಿವಾಸಿ ನವೀನ್ ನಾಯ್ಕ (22) ಎಂದು ಗುರುತಿಸಲಾಗಿದೆ.
ಆರೋಪಿಯು 2023ರಲ್ಲಿ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತನ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ಸೆ.1ರಂದು ಬೆಳಗಿನ ಜಾವ 2.15 ಗಂಟೆ ಸುಮಾರಿಗೆ ಮಣಿಪಾಲದ ಅನಂತನಗರ ಎಂಬಲ್ಲಿರುವ ಹಿಂದುಳಿದ ವರ್ಗದವರ ಮೆಟ್ರಿಕ್ ನಂತರದ ಹಾಸ್ಟೆಲ್ನ ಕಿಟಕಿಯಿಂದ ಕೈಹಾಕಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ನೇತೃತ್ವದಲ್ಲಿ ಪಿಎಸ್ಐ ರಾಘವೇಂದ್ರ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಬಾಗಲಕೋಟೆ: ಶೌಚಾಲಯದಲ್ಲಿ ಗಂಡು ಶಿಶುವಿನ ಮೃತದೇಹ ಎಸೆದ ಪಾಪಿಗಳು