ವಿಜೃಂಭಣೆಯಿಂದ ನಡೆದ ಮಲೆ ಮಹದೇಶ್ವರ ಯುಗಾದಿ ರಥೋತ್ಸವ: Video - Maharatostava

By ETV Bharat Karnataka Team

Published : Apr 9, 2024, 3:37 PM IST

thumbnail

ಚಾಮರಾಜನಗರ: ನಾಡಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಪ್ರಯುಕ್ತ ಕೊನೆಯ ದಿನವಾದ ಮಂಗಳವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಶ್ರೀ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಬೇಡಗಂಪಣ ಅರ್ಚಕರು ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ತೇರನ್ನು ವಿವಿಧ ಬಗೆಯ ಪುಷ್ಪಗಳು, ತಳಿರು ತೋರಣ, ಬಣ್ಣದ ಬಟ್ಟೆಗಳಿಂದ ಸಿಂಗರಿಸಲಾಗಿತ್ತು.

ರಥೋತ್ಸವಕ್ಕೂ ಮುನ್ನ ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಬೇಡಗಂಪಣ ಅರ್ಚಕ ವೃಂದದವರು ದೇಗುಲದ ಗರ್ಭಗುಡಿಯಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ತೇರಿನ ಬಳಿ ಧಾರ್ಮಿಕ ವಿಧಿ ವಿಧಾನ, ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಆ ಬಳಿಕ ಉತ್ಸವ ಮೂರ್ತಿ ಇರಿಸಿ ಬೂದು ಕುಂಬಳಕಾಯಿ ದೃಷ್ಟಿ ತೆಗೆದು ಮಹಾಮಂಗಳಾರತಿ ಹಾಗೂ ಬೇಡಗಂಪಣ ಸಮುದಾಯದ ಹೆಣ್ಣು ಮಕ್ಕಳಿಂದ ಬೆಲ್ಲದ ಆರತಿ ಬೆಳಗಲಾಯಿತು. ಬಳಿಕವಷ್ಟೇ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ದೇಗುಲದ ಮುಖ್ಯದ್ವಾರದ ಆವರಣದಿಂದ ಸತ್ತಿಗೆ ಸೂರಿಪಾನಿ, ಛತ್ರಿ, ಚಾಮರ, ನಂದಿ ದ್ವಜ ಹಾಗೂ ಮಂಗಳವಾದ್ಯದೊಂದಿಗೆ ತೇರು ಎಳೆಯಲಾಯಿತು. ಹುಲಿವಾಹನ, ಬಸವ ವಾಹನ ಹಾಗೂ ರುದ್ರಾಕ್ಷಿ ವಾಹನೋತ್ಸವವು ನಡೆಯಿತು. ವೀರಗಾಸೆ ಕುಣಿತ ಭಕ್ತಾದಿಗಳ ಗಮನ ಸೆಳೆಯಿತು. ಭಕ್ತರು ತೇರಿಗೆ ಹಣ್ಣು, ದವಸ ಧಾನ್ಯಗಳನ್ನು ಎಸೆದು ಮಾದಪ್ಪನ ಕೃಪೆಗೆ ಪಾತ್ರರಾದರು. ತಮಿಳುನಾಡು ಹಾಗೂ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ರಥೋತ್ಸವ: ವೈಭವ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.