ಯಶ್, ದರ್ಶನ್ ಅವರಿಂದ ಮತ್ತೆ ಪ್ರಚಾರದ ನಿರೀಕ್ಷೆ ಮಾಡಲು ಮನಸ್ಸು ಒಪ್ಪುತ್ತಿಲ್ಲ: ಸುಮಲತಾ - ನಟ ಯಶ್
🎬 Watch Now: Feature Video
Published : Mar 4, 2024, 9:47 AM IST
ಮಂಡ್ಯ: ಮುಂಬರುವ ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ಸಂಸದೆ ಸುಮಲತಾ ಅವರಿದ್ದಾರೆ. ಟಿಕೆಟ್ ಸಿಕ್ಕರೆ ಈ ಬಾರಿ ತಮ್ಮ ಪರ ಚುನಾವಣಾ ಪ್ರಚಾರಕ್ಕೆ ನಟ ಯಶ್ ಬರುತ್ತಾರಾ ಎಂಬ ವಿಚಾರದ ಬಗ್ಗೆ ಅವರು ಮಾತನಾಡಿದರು. ಮಂಡ್ಯದಲ್ಲಿ ಭಾನುವಾರ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ತಮ್ಮ ಕೆಲಸದಲ್ಲಿ ತುಂಬಾ ಬ್ಯುಸಿ ಆಗಿದ್ದಾರೆ. ಅವರಿಂದ ಮತ್ತೆ ಪ್ರಚಾರದ ನಿರೀಕ್ಷೆ ಮಾಡಲು ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದರು.
"ಈ ಬಗ್ಗೆ ಇನ್ನೂ ಪ್ಲಾನ್ ಮಾಡಿಲ್ಲ. ಕಳೆದ ಬಾರಿ ನಾನು ಸ್ವತಂತ್ರ ಅಭ್ಯರ್ಥಿಯಾಗಿದ್ದೆ. ರಾಜಕೀಯದ ಯಾವುದೇ ಅನುಭವ ಇಲ್ಲದೆ, ಮೊದಲ ಚುನಾವಣೆಯಾಗಿತ್ತು. ಆಗ ನನಗೆ ಬೇಕಾದವರೆಲ್ಲ ನಾವಿದ್ದೇವೆ ನಿಮ್ಮ ಜೊತೆ ಅಂತ ನನ್ನ ಪರವಾಗಿ ನಿಂತಿದ್ದರು. ಆದರೆ ಈಗ ಪರಿಸ್ಥಿತಿ ಬೇರೇ. ಒಂದು ಪಕ್ಷವನ್ನು ನಾನು ಪ್ರತಿನಿಧಿಸುತ್ತಿದ್ದೇನೆ. ಆಗ ನಾನು ಪಕ್ಷ ಏನು ಹೇಳುತ್ತದೋ ಅದನ್ನು ಕೇಳಬೇಕು. ಪಕ್ಷದ ನಾಯಕರು ನನ್ನ ಜೊತೆಗಿರುತ್ತಾರೆ" ಎಂದರು.
"ಆಗ ನಮ್ಮ ಜೊತೆ ಯಾರೆಲ್ಲ ಇದ್ದರೋ, ಅವರೆಲ್ಲ ಈಗಲೂ ಜೊತೆಗಿದ್ದಾರೆ. ಆಗ ಯಶ್ ಹಾಗೂ ದರ್ಶನ್ ಮಾಡಿದ್ದು, ಕೇವಲ ಬೆಂಬಲವಲ್ಲ, ನನಗೋಸ್ಕರ ಮಾಡಿದ ತ್ಯಾಗ ಅದು. ಇಬ್ಬರು ದಕ್ಷಿಣ ಭಾರತದ ಸೂಪರ್ಸ್ಟಾರ್ 25 ದಿನಗಳು ಜೊತೆಗಿದ್ದು, ಯಾವುದೇ ಸ್ವಾರ್ಥವಿಲ್ಲದೆ, ನನ್ನ ಪರವಾಗಿ ಪ್ರಚಾರ ಮಾಡಿದ್ದರು. ಯಾವುದನ್ನೂ ಎದುರು ನೋಡದೆ, ಏನನ್ನೂ ಲೆಕ್ಕಿಸದೆ ಅವರು ನನ್ನ ಪರವಾಗಿ ನಿಂತಿದ್ದರು. ಪದೇ ಪದೇ ಅವರನ್ನು ಎಲ್ಲಾ ಕೆಲಸಗಳನ್ನು ಬಿಟ್ಟು ನನ್ನ ಜೊತೆ ಬನ್ನಿ ಅಂತ ಕರೆಯೋಕೆ ನನ್ನ ಮನಸು ಒಪ್ಪುತ್ತಿಲ್ಲ. ಅವರು ಬರ್ತೇವೆ ಎಂದರೆ, ಖಂಡಿತಾ ನಾನು ಅವರನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಅದು ನನಗೆ ದೊಡ್ಡ ಶಕ್ತಿಯಾಗಿರುವುದರಲ್ಲಿ ಎರಡನೇ ಮಾತಿಲ್ಲ" ಎಂದು ಹೇಳಿದರು.
"ಕಳೆದ ಬಾರಿಯೂ ನಾನು ಕರೆದು ಅವರು ಬಂದಿಲ್ಲ. ನಮ್ಮ ಮನೆ ಮಕ್ಕಳ ಹಾಗೆ, ಅಂಬರೀಶ್ ಅವರ ಮೇಲೆ ಅವರಿಗಿದ್ದ ಅಭಿಮಾನ, ನಮ್ಮ ಕುಟುಂಬ ಜೊತೆಗೆ ಅವರಿಗಿದ್ದ ನಂಟು, ಎಲ್ಲದರಿಂದ ಅವರೇ ಬಂದರು. ಆಗ ನಾನಿದ್ದ ಪರಿಸ್ಥಿತಿಗೆ, ನಾವು ನಿಮ್ಮ ಜೊತೆಗಿದ್ದೇವೆ. ಯಾವ ನಿರ್ಧಾರವನ್ನು ಬೇಕಾದರೂ ತೆಗೆದುಕೊಳ್ಳಿ ಎಂದು ಬೆನ್ನಿಗೆ ನಿಂತಿದ್ದರು. ಈಗಲೂ ಅಷ್ಟೇ ಅವರ ಆ ಮಾತುಗಳನ್ನು ಹೇಳಿದರೆ, ಖಂಡಿತ ಖುಷಿಪಡುತ್ತೇನೆ. ಇಲ್ಲ ಎಂದು ಹೇಳಿದರೂ, ನಾನು ಯಾರ ಮೇಲೆಯೂ ಬೇಜಾರು ಮಾಡಿಕೊಳ್ಳಲ್ಲ" ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಇದನ್ನೂ ನೋಡಿ: ಮೈಶುಗರ್ ಕಾರ್ಖಾನೆಯನ್ನು ಯಾರೂ ಟಚ್ ಮಾಡಬಾರದು: ಸಂಸದೆ ಸುಮಲತಾ