ವಿಡಿಯೋ: ಬಂಡೀಪುರದಲ್ಲಿ ಮರಿಗೆ ಹೊಂಚು ಹಾಕಿದ್ದ ವ್ಯಾಘ್ರನನ್ನು ಅಟ್ಟಾಡಿಸಿದ ಆನೆ - Elephant Calf
🎬 Watch Now: Feature Video
Published : Mar 7, 2024, 8:19 AM IST
ಚಾಮರಾಜನಗರ: ಹುಲಿಯನ್ನು ಆನೆಯೊಂದು ಅಟ್ಟಾಡಿಸಿ ಓಡಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದಲ್ಲಿ ನಡೆದಿದ್ದು, ಸಫಾರಿಗರು ದೃಶ್ಯ ಕಂಡು ರೋಮಾಂಚಿತರಾಗಿದ್ದಾರೆ. ಬುಧವಾರ ಸಂಜೆ 4ರ ಸಫಾರಿಯಲ್ಲಿ ಈ ಘಟನೆ ನಡೆದಿದೆ. ಆನೆಯೊಂದು ತನ್ನ ಮರಿ ಜೊತೆ ತೆರಳುತ್ತಿದ್ದಾಗ ಎದುರು ಬಂದ ಹುಲಿರಾಯ ಮರಿ ಮೇಲೆ ಹೊಂಚು ಹಾಕಿದೆ. ಕೂಡಲೇ ಎಚ್ಚೆತ್ತ ಆನೆ, ಹುಲಿಯನ್ನು ಅಟ್ಟಾಡಿಸಿ ಪೇರಿ ಕೀಳುವಂತೆ ಮಾಡಿದೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಎರಡನೇ ಅತ್ತ್ಯುತ್ತಮ ವನ್ಯಧಾಮ: ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಮತ್ತೊಮ್ಮೆ 'ಅತ್ಯುತ್ತಮ ವನ್ಯಧಾಮ' ಪ್ರಶಸ್ತಿ ಲಭಿಸಿದೆ. ಈ ಕುರಿತುಬಂಡೀಪುರದಲ್ಲಿ ಸಿಎಫ್ಒ ರಮೇಶ್ ಕುಮಾರ್ ಮೂಲಕ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರ ನಡೆಸುವ ಸಮೀಕ್ಷೆಯಲ್ಲಿ ಬಂಡೀಪುರ ಎರಡನೇ ಅತ್ಯುತ್ತಮ ವನ್ಯಧಾಮ ಎಂದು ಎಂಬ ಹಿರಿಮೆಗೆ ಪಾತ್ರವಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ, ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಮಿನಿಸ್ಟ್ರಿ ಆಫ್ ಎನ್ವಿರಾನ್ಮೆಂಟ್ ಆ್ಯಂಡ್ ಫಾರೆಸ್ಟ್ ಸಂಸ್ಥೆಯು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ, ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗೆ ಕೈಗೊಂಡ ಕ್ರಮಗಳು, ಪ್ರವಾಸಿಗರು, ಶುಚಿತ್ವ ಹಾಗೂ ಸಿಬ್ಬಂದಿ ಮುಂತಾದ ಅಂಶಗಳ ಮಾನದಂಡಗಳನ್ನು ಪರಿಗಣಿಸಿ ಸಮೀಕ್ಷೆ ನಡೆಸುತ್ತದೆ ಎಂದು ಅವರು ವಿವರಿಸಿದ್ದಾರೆ.
ಕೇರಳದ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೊದಲ ಸ್ಥಾನ, ಬಂಡಿಪುರ ಎರಡನೇ ಸ್ಥಾನ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೂರನೇ ಸ್ಥಾನ ಲಭಿಸಿದೆ.