LIVE: 18ನೇ ಲೋಕಸಭೆ ಅಧಿವೇಶನ: ಇಂದೂ ಮುಂದುವರಿದ ಪ್ರಮಾಣ ವಚನ ಸ್ವೀಕಾರ - Lok Sabha Session

By ETV Bharat Karnataka Team

Published : Jun 25, 2024, 11:14 AM IST

Updated : Jun 25, 2024, 1:21 PM IST

thumbnail

ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ ಸೋಮವಾರ ಆರಂಭವಾಗಿದ್ದು, ಇಂದು (ಮಂಗಳವಾರ) ಎರಡನೇ ದಿನಕ್ಕೆ ಕಾಲಿಟ್ಟಿದೆ. ಜುಲೈ 3ರ ವರೆಗೆ ಈ ಸಂಸತ್​ ಕಲಾಪ ನಡೆಯಲಿದ್ದು, ಈ ವೇಳೆ ಹಲವು ವಿಚಾರಗಳು ಪ್ರಸ್ತಾಪಗೊಳ್ಳಲಿವೆ.  ಏಪ್ರಿಲ್​​ನಿಂದ ಜೂನ್​ ವರೆಗೆ ನಡೆದ ಸಾರ್ವತ್ರಿಕ ಚುನಾವಣೆಯ ನಂತರ ನಡೆಯುತ್ತಿರುವ ಮೊದಲ ಲೋಕಸಭೆ ಅಧಿವೇಶ ಇದಾಗಿದೆ. ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹೊಸದಾಗಿ ಚುನಾಯಿತರಾದ  ಸಂಸದರು ಪ್ರಮಾಣ ವಚನ ಸ್ವೀಕರಿಸಿದರು.  ಹಂಗಾಮಿ ಸ್ಪೀಕರ್​ ನೇಮಕದ ವಿಚಾರವಾಗಿ ಪ್ರತಿಪಕ್ಷಗಳು ಸಂಸತ್ತಿನ ಗಾಂಧಿ ಪ್ರತಿಮೆ ಎದುರು ಸಂವಿಧಾನದ ಪ್ರತಿಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದವು.  8 ಬಾರಿ ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್‌ನ ಹಿರಿಯ ಸದಸ್ಯ, ದಲಿತ ನಾಯಕ ಕೆ. ಸುರೇಶ್‌ ಅವರನ್ನು ಬಿಟ್ಟು 7 ಬಾರಿ ಸಂಸದರಾಗಿ ಆಯ್ಕೆಯಾದ ಮಹತಾಬ್‌ ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸಲಾಗಿದೆ ಎಂದು ಎನ್‌ಡಿಎ ವಿರುದ್ಧ ಕಿಡಿ ಕಾರಿದರು. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇಂಡಿಯಾ ಬ್ಲಾಕ್ ನಾಯಕರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವಿಷಯ ಸೇರಿದಂತೆ ಇತ್ತೀಚೆಗಿನ ನೀಟ್​-ಯುಜಿ ಹಾಗೂ ಯುಜಿಸಿ-ನೆಟ್​ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಗಳು ಸಂಸತ್​ನಲ್ಲಿ ಚರ್ಚೆಗೆ ಬರಲಿವೆ. ಇವೆಲ್ಲದರ ಬಗ್ಗೆ ಆಳುವ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿದ್ದು, ಸದನದಲ್ಲಿ ಗದ್ದಲ ಏರ್ಪಡುವ ಸಾಧ್ಯತೆಗಳಿವೆ. ಜೂನ್ 26ರಂದು ಸ್ಪೀಕರ್ ಆಯ್ಕೆ ನಡೆಯುವ ಸಾಧ್ಯತೆ ಇದ್ದು, ಜೂನ್ 27ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಎರಡನೇ ದಿನವಾದ ಇಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸೇರಿದಂತೆ 281 ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Last Updated : Jun 25, 2024, 1:21 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.