ಉಡುಪಿ ಶ್ರೀಕೃಷ್ಣಮಠದಲ್ಲಿ ಕದಿರು ಕಟ್ಟುವ ಹಬ್ಬ: ವಿಶೇಷ ಪೂಜೆ, ಭಕ್ತರಿಗೆ ಕದಿರು ವಿತರಣೆ - KADIRU KATTUVA HABBA
🎬 Watch Now: Feature Video
Published : Oct 13, 2024, 10:41 AM IST
ಉಡುಪಿ: ಉಡುಪಿ ಶ್ರೀಕೃಷ್ಣಮಠದಲ್ಲಿ ಕದಿರು ಕಟ್ಟುವ ಹಬ್ಬ ಶನಿವಾರ ಸಂಭ್ರಮದಿಂದ ನಡೆಯಿತು. ಮಠದ ಪುರೋಹಿತರು ಸಮೀಪದ ಗದ್ದೆಯಲ್ಲಿ ಹೊಸದಾಗಿ ಬೆಳೆದ ಭತ್ತದ ಕದಿರಿಗೆ ಪೂಜೆ ಸಲ್ಲಿಸಿದ ಬಳಿಕ, ರಥಬೀದಿಗೆ ತಂದರು. ಬಳಿಕ ಸ್ವರ್ಣ ಪಲ್ಲಕ್ಕಿಯಲ್ಲಿಟ್ಟು ವಾದ್ಯ, ಮಂತ್ರಘೋಷಸಹಿತ ಸಾಂಪ್ರದಾಯಿಕ ಬಿರುದಾವಳಿಗಳೊಂದಿಗೆ ಮೆರವಣಿಗೆಯಲ್ಲಿ ಕೃಷ್ಣಮಠಕ್ಕೆ ತರಲಾಯಿತು.
ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಸುಶೀಂದ್ರತೀರ್ಥ ಶ್ರೀಪಾದರು, ಮಠದ ಪುರೋಹಿತರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.
ವರ್ಷಕ್ಕೆರಡು ಬಾರಿ ತೆರೆಯುವ ಗರ್ಭಗುಡಿಯ ಮೂಡಣ ದ್ವಾರ: ಕದಿರನ್ನು ಶ್ರೀಕೃಷ್ಣನ ಗರ್ಭಗುಡಿಯ ಮೂಡಣದ್ವಾರದ ಮೂಲಕವೇ ಒಳತಂದು ಕೃಷ್ಣನ ಮುಂದಿಟ್ಟು ಶ್ರೀಗಳು ಮಂಗಳಾರತಿ ಬೆಳಗಿದರು. ವಿಶೇಷವೆಂದರೆ, ಹೊಸ್ತಿಲು ಹುಣ್ಣಿಮೆಯ ದಿನ ಮತ್ತು ಕದಿರಾರೋಹಣದ ಎರಡು ದಿನಗಳಂದು ಮಾತ್ರ ಗರ್ಭಗುಡಿಯ ಮೂಡಣ ದ್ವಾರ ತೆರೆಯಲಾಗುತ್ತದೆ.
ಅಲ್ಲಿಂದ ಕದಿರನ್ನು ಧಾನ್ಯ ಸಂಗ್ರಹಾಗಾರವಿರುವ ಬಡಗು ಮಾಳಿಗೆಗೆ ತಂದು ಆರತಿ ಬೆಳಗಲಾಯಿತು. ಉಡುಪಿಯ ಅಷ್ಟ ಮಠಗಳು, ಇತರೆ ಮಠಗಳು ಹಾಗೂ ಆಸುಪಾಸಿನ ನೂರಾರು ಮನೆಗಳ ಭಕ್ತರಿಗೆ ಭತ್ತದ ತೆನೆಗಳನ್ನು ಪ್ರಸಾದವಾಗಿ ವಿತರಿಸಲಾಯಿತು.
ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನಾಚಾರ್ಯ, ವಿದ್ವಾಂಸರುಗಳಾದ ಮಧ್ವರಮಾನಾಚಾರ್ಯ, ಗೋಪಾಲಾಚಾರ್ಯ, ವೇದವ್ಯಾಸ ಪುರಾಣಿಕ, ಪುರೋಹಿತರಾದ ರಾಘವೇಂದ್ರ ಕೊಡಂಚ, ಕೊಟ್ಟಾರಿ ರಾಮ ಕೊಡಂಚ, ನಾಗರಾಜತಂತ್ರಿ ಇದ್ದರು.
ಇದನ್ನೂ ಓದಿ: ಅಂಬು ಛೇದನ ಮಾಡಿದ ತಹಶೀಲ್ದಾರ್ ಗಿರೀಶ್: ಶಿವಮೊಗ್ಗ ದಸರಾ ಸಂಪನ್ನ