ಹುಬ್ಬಳ್ಳಿಯಲ್ಲಿ ಕುಡಿಯುವ ನೀರಿಗೆ ಪ್ರತಿಭಟನೆ: ಲೋಕಸಭೆ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ - Protest For Drinking Water - PROTEST FOR DRINKING WATER
🎬 Watch Now: Feature Video
Published : May 3, 2024, 6:22 PM IST
ಹುಬ್ಬಳ್ಳಿ(ಧಾರವಾಡ): ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ನಗರದ ಪ್ರತಿಷ್ಠಿತ ವಿದ್ಯಾನಗರದ ತಿಮ್ಮಸಾಗರ ಬಡಾವಣೆಯ ನಿವಾಸಿಗಳು ಇಂದು ಕುಡಿಯುವ ನೀರಿಗೆ ಆಗ್ರಹಿಸಿ ಹೊಸೂರು ಕೋರ್ಟ್ ಎದುರು ಖಾಲಿ ಕೊಡ ಪ್ರದರ್ಶಿಸಿ, ರಸ್ತೆ ತಡೆದರು.
ಮೂಲಭೂತ ಸೌಲಭ್ಯವಾದ ಕುಡಿಯುವ ನೀರು ಕೊಡಲು ಸಾಧ್ಯವಾಗದ ಪಾಲಿಕೆಗೆ ಹಾಗೂ ಜನರ ಸಮಸ್ಯೆ ಆಲಿಸದ ಪಾಲಿಕೆ ಸದಸ್ಯರಿಗೆ, ಶಾಸಕರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮೇ 7ರಂದು ನಡೆಯುವ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿಯೂ ಎಚ್ಚರಿಸಿದರು.
"ಜಲಮಂಡಳಿ ಸುಪರ್ದಿಯಲ್ಲಿದ್ದಾಗ 5 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುತ್ತಿದ್ದರು. ಎರಡು ವರ್ಷದ ಹಿಂದೆ ಎಲ್ ಆ್ಯಂಡ್ ಟಿ ಕಂಪನಿಗೆ ಹಸ್ತಾಂತರಿಸಿದ ನಂತರ 7 ದಿನಕ್ಕೊಮ್ಮೆ ನೀರು ಬಿಡಲು ಆರಂಭಿಸಿದರು. ಎರಡು ತಿಂಗಳಿನಿಂದ 10-15 ದಿನಗಳಿಗೊಮ್ಮೆ ನೀರು ನೀಡಲಾಗುತ್ತಿದೆ. ಬೆಳಗ್ಗಿನಿಂದಲೇ ಪಾಲಿಕೆಗೆ, ಎಲ್ ಆ್ಯಂಡ್ ಟಿ ಕಂಪನಿಗೆ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ನಿವಾಸಿಗಳೆಲ್ಲಾ ಒಟ್ಟಾಗಿ ಚುನಾವಣೆ ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ" ಎಂದು ಸ್ಥಳೀಯರಾದ ಆಶಾ ತಿಳಿಸಿದರು.
ಬಡಾವಣೆಯ 30ಕ್ಕೂ ಹೆಚ್ಚು ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅರ್ಧ ಗಂಟೆಗೂ ಹೆಚ್ಚು ಸಮಯ ವಾಹನಗಳ ಸಂಚಾರ ಸ್ಥಗಿತಗೊಳಿಸಿ, ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.