ಚಾಮರಾಜನಗರ: 17 ತಾಸು ಭವ್ಯ ಮೆರವಣಿಗೆ ಬಳಿಕ ಪೊಲೀಸ್ ಗಣಪತಿ ನಿಮಜ್ಜನ - Ganapathi Immersion - GANAPATHI IMMERSION
🎬 Watch Now: Feature Video
Published : Oct 5, 2024, 12:19 PM IST
ಚಾಮರಾಜನಗರ: ನಗರದ ರಥ ಬೀದಿಯಲ್ಲಿ ಶ್ರೀ ವಿದ್ಯಾ ಗಣಪತಿ ಮಂಡಳಿ ವತಿಯಿಂದ ಪ್ರತಿಷ್ಠಾಪನೆ ಮಾಡಿದ್ದ ಅಯೋಧ್ಯಾ ರಾಮ ಗಣಪತಿ ನಿಮಜ್ಜನ ಶೋಭಾಯಾತ್ರೆ ವಿಜೃಂಭಣೆಯಿಂದ ಜರುಗಿತು. ಶುಕ್ರವಾರ ಬೆಳಗ್ಗೆ 11ರ ಸುಮಾರಿಗೆ ಆರಂಭಗೊಂಡಿದ್ದ ಗಣಪತಿ ಮೆರವಣಿಗೆ, ಜಾನಪದ ಕಲಾತಂಡಗಳೊಂದಿಗೆ ನಗರದಾದ್ಯಂತ ನಡೆಯಿತು.
ಬರೋಬ್ಬರಿ 17 ತಾಸು ನಡೆದ ಉತ್ಸವದ ಬಳಿಕ ಶನಿವಾರ ಬೆಳಗಿನ ಜಾವ 4 ಗಂಟೆ ವೇಳೆಗೆ ದೊಡ್ಡರಸನ ಕೊಳದಲ್ಲಿ ಕ್ರೇನ್ ಸಹಾಯದಿಂದ ಮೂರ್ತಿಯನ್ನು ನಿಮಜ್ಜನಗೊಳಿಸಲಾಯಿತು. ಗಣಪತಿ ಮೆರವಣಿಗೆಯಲ್ಲಿ ಪೊಲೀಸರೇ ಹೆಚ್ಚಾಗಿ ಕಂಡುಬರುವುದರಿಂದ ಈ ವಿದ್ಯಾ ಗಣಪತಿಯನ್ನು ಪೊಲೀಸ್ ಗಣಪತಿ, ಹಿಂದೂ ಪರ ಸಂಘಟನೆಗಳು ಪ್ರತಿಷ್ಠಾಪಿಸುವುದರಿಂದ ಆರ್ಎಸ್ಎಸ್ ಗಣಪತಿ ಎಂದೇ ಕರೆಯಲಾಗುತ್ತದೆ. ಗಣಪತಿ ಮೆರವಣಿಗೆಗೆ ವಿವಿಧ ಜಾನಪದ ಕಲಾತಂಡಗಳು ಮೆರುಗು ನೀಡಿದವು. ಗಾರುಡಿಗೊಂಬೆ, ಕಂಸಾಳೆ, ಗೊರವರ ಕುಣಿತ, ಚಂಡೆ, ವಿವಿಧ ವೇಷದಾರಿಗಳು ಗಮನ ಸೆಳೆದವು.
ಬಿಗಿ ಪೊಲೀಸ್ ಬಂದೋಬಸ್ತ್: ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟಡದ ಮೇಲೆ ಕೂರುವುದು, ಪಟಾಕಿ ಸಿಡಿಸುವುದಕ್ಕೆ ನಿರ್ಬಂಧ ಹೇರಲಾಗಿತ್ತು. ಜೊತೆಗೆ ಮದ್ಯ ಮಾರಾಟವನ್ನು ಜಿಲ್ಲಾ ಕೇಂದ್ರದಲ್ಲಿ ಬಂದ್ ಮಾಡಲಾಗಿತ್ತು. ಗಣಪತಿ ಶೋಭಾಯಾತ್ರೆಗೆ ಈ ಬಾರಿ 6 ಡಿವೈಎಸ್ಪಿ, 28 ಪಿಐ, 48 ಮಂದಿ ಪಿಎಸ್ಐ ಸೇರಿ 750 ಮಂದಿ ಪೊಲೀಸರು, 100 ಮಂದಿ ಹೋಂ ಗಾರ್ಡ್ಗಳು, 5 ಕೆಎಸ್ಆರ್ಪಿ ಹಾಗೂ 6 ಡಿಆರ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.