ತೆಲಂಗಾಣದ ಜಡಚರ್ಲ ಬಳಿ ಭೀಕರ ಅಪಘಾತ: ಡಿಸಿಎಂ ವ್ಯಾನ್ಗೆ ಡಿಕ್ಕಿ ಹೊಡೆದ ಬಸ್ಗೆ ತಗುಲಿದ ಬೆಂಕಿ - Fatal accident near Jadcharla - FATAL ACCIDENT NEAR JADCHARLA
🎬 Watch Now: Feature Video
Published : Jul 15, 2024, 1:30 PM IST
ಜಡಚರ್ಲ (ತೆಲಂಗಾಣ): ರಾಷ್ಟ್ರೀಯ ಹೆದ್ದಾರಿ - 44ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎಪಿಎಸ್ಆರ್ಟಿಸಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಭಾನುವಾರ ತಡರಾತ್ರಿ 1.45ರ ಸುಮಾರಿಗೆ ತೆಲಂಗಾಣ ರಾಜ್ಯದ ಮಹೆಬೂಬ್‌ನಗರ ಜಿಲ್ಲೆಯ ಜಡಚರ್ಲ ಮಂಡಲದ ಬುರೆಡ್ಡಿಪಲ್ಲಿ ಬಳಿ ಈ ಘಟನೆ ನಡೆದಿದೆ. ಆಂಧ್ರಪ್ರದೇಶದ ಶ್ರೀಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಎಪಿಎಸ್ಆರ್ಟಿಸಿ ಡಿಪೋಗೆ ಸೇರಿದ ಐಷಾರಾಮಿ ಬಸ್ ಹೈದರಾಬಾದ್‌ನ ಎಂಜಿಬಿಎಸ್‌ನಿಂದ ಭಾನುವಾರ ಮಧ್ಯರಾತ್ರಿ ಪ್ರಯಾಣಿಕರೊಂದಿಗೆ ಹೊರಟಿದೆ.
ಜಡಚರ್ಲ ಮಂಡಲ ಬುರೆಡ್ಡಿಪಲ್ಲಿ ತಿರುವು ತಲುಪುತ್ತಿದ್ದಂತೆಯೇ ಡಿಸಿಎಂ ಸರಕು ಸಾಗಣೆ ವಾಹನ ಯು ಟರ್ನ್ ತೆಗೆದುಕೊಂಡಿದೆ. ಈ ಸಂದರ್ಭದಲ್ಲಿ ಸರ್ಕಾರಿ ಬಸ್ ಹಾಗೂ ಡಿಸಿಎಂ ವ್ಯಾನ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಬಸ್ ನಿಯಂತ್ರಣ ತಪ್ಪಿ ಬಲಬದಿಯ ರಸ್ತೆಗೆ ಉರುಳಿದೆ. ಚಾಲಕ ಮತ್ತು ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದ ಪ್ರಯಾಣಿಕರು ಎಚ್ಚೆತ್ತು ಗಾಜುಗಳನ್ನು ಒಡೆದು ಹೊರಬಂದರು.
ಗಂಭೀರವಾಗಿ ಗಾಯಗೊಂಡವರನ್ನು ರಕ್ಷಿಸಲು ಪ್ರಯತ್ನಿಸಲಾಯಿತು. ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅಷ್ಟರಲ್ಲಿ ಬಸ್ನಲ್ಲಿ ಬೆಂಕಿ ಹೊತ್ತಿಕೊಂಡಿತು. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿಯನ್ನು ನಿಯಂತ್ರಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. 2.30ರ ವೇಳೆಗೆ ಬಸ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಗಾಯಗೊಂಡವರನ್ನು ಮಹಬೂಬ್‌ನಗರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಲಕ್ಷ್ಮೀದೇವಿ (ಅನಂತಪುರಂ), ಸಂಜೀವ (ಅನಂತಪುರಂ), ಮೋಹನ್ (ಕೂಕಟ್ಪಲ್ಲಿ, ಹೈದರಾಬಾದ್), ಮೈಥಿಲಿ (ಹೈದರಾಬಾದ್), ಕಾರ್ತಿಕ್ (ನಂದ್ಯಾಲ), ದಸ್ತಗಿರಿ (ನಂದ್ಯಾಲ), ಹೀರಾಲಾಲ್ (ಕೋಠಿ, ಹೈದರಾಬಾದ್), ಅರ್ಚನಾ (ನಾಚರಂ, ಹೈದರಾಬಾದ್), ಸುನೀಲ್ (ಅನಂತಪುರಂ ), ಗಾಯತ್ರಿ (ಅನಂತಪುರಂ) ಮತ್ತು ಇತರ ಕೆಲವು ಪ್ರಯಾಣಿಕರು ಚಿಕಿತ್ಸೆ ಪಡೆಯುತ್ತಿದ್ದಾರೆ. 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹಾಗೂ 108 ಸಿಬ್ಬಂದಿ ತಿಳಿಸಿದ್ದಾರೆ. ಬಸ್ ಡಿಕ್ಕಿ ಹೊಡೆದ ಸ್ಥಳದಲ್ಲಿ ವಿದ್ಯುತ್ ತಂತಿಗಳು ಬಿದ್ದಿದ್ದವು. ಆದರೆ ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.