ಲೋಕಸಭೆಗೆ ಪಕ್ಷ ನನ್ನನ್ನೇ ಅಭ್ಯರ್ಥಿ ಮಾಡಿದರೆ ಸ್ಪರ್ಧಿಸುವೆ; ಬಿಸಿ ಪಾಟೀಲ
🎬 Watch Now: Feature Video
ಹಾವೇರಿ: ಹಾವೇರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದರ ಬಗ್ಗೆ ಮುಂದಿನ ದಿನಗಳಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪಕ್ಷ ಯಾವ ಅಭ್ಯರ್ಥಿ ಆಯ್ಕೆ ಮಾಡಿದರೂ ಸಹ ಅವರನ್ನು ಗೆಲ್ಲಿಸುವ ಕಾರ್ಯ ಮಾಡುತ್ತೇವೆ ಎಂದು ಮಾಜಿ ಸಚಿವ ಬಿಸಿ ಪಾಟೀಲ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಪಕ್ಷ ಸರ್ವೆ ನಡೆಸಿದೆ. ಸರ್ವೆಯಲ್ಲಿ ಯಾರ ಹೆಸರು ಬರುತ್ತದೋ ಅದನ್ನು ನೋಡಿ ಪಕ್ಷ ನಿರ್ಧರಿಸಲಿದೆ. ಒಂದು ವೇಳೆ ಪಕ್ಷ ನನ್ನನ್ನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಿದರೆ ನಾನು ಸಹ ಸ್ಪರ್ಧಿಸುತ್ತೇನೆ. ನಾನು ರಾಜಕೀಯ ಸನ್ಯಾಸಿ ಅಲ್ಲ ಎಂದರು.
ಜಗದೀಶ ಶೆಟ್ಟರ್ ಪಕ್ಷ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಹುಕಾಲ ಗುಳಿಗಕಾಲ ಇದ್ದಂತೆ, ಅವರಿಗೆ ಕಾಲ ಕೆಟ್ಟಿದ್ದರಿಂದ ಅನ್ಯಾಯದಿಂದ ಮಾಜಿ ಸಿಎಂ ಜಗದೀಶ ಶೆಟ್ಟರ್ ಬಿಜೆಪಿ ತೊರೆದಿದ್ದರು. ಅವರು ಮನಸ್ಸು ಬದಲಿಸಿ ಬಿಜೆಪಿಗೆ ಕರೆತಂದಿದ್ದಾರೆ. ಅವರು ಬಿಜೆಪಿಗೆ ಬಂದಿರುವುದು ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ ಎಂದರು.
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ವಿರೋಧಿಸಿ ನಗರದಲ್ಲಿಯೂ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಘಟನೆ ಖಂಡಿಸಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವರು, ಈ ಘಟನೆಯ ಹಿಂದೆ ಪೊಲೀಸ್ ಇಲಾಖೆ ಮತ್ತು ಕಾಂಗ್ರೆಸ್ ಪಕ್ಷದ ಪಿತೂರಿಯಿದೆ ಎಂದು ಆರೋಪಿಸಿದರು. ಇದಕ್ಕೂ ಮೊದಲು ಕಾಗಿನೆಲೆ ರಸ್ತೆಯ ಬಿಜೆಪಿ ಜಿಲ್ಲಾ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ್ ಪೂಜಾರ್ ಸೇರಿದಂತೆ ವಿವಿಧ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
ಇದನ್ನೂ ಓದಿ: ಹನುಮ ಧ್ವಜ ತೆರವು ವಿವಾದ: ಕೆರಗೋಡು ಗ್ರಾಮದಿಂದ ಬಿಜೆಪಿ ಬೃಹತ್ ಪಾದಯಾತ್ರೆ