WhatsApp New PIN Lock Feature: ಜನಪ್ರಿಯ ಮೆಸ್ಸೇಜಿಂಗ್ ಅಪ್ಲಿಕೇಶನ್ WhatsApp ತನ್ನ ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸಲು ನಿರಂತರವಾಗಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಇದರ ಭಾಗವಾಗಿ ವಾಟ್ಸ್ ಆಪ್ ಪ್ರೊಫೈಲ್ನ ಸ್ಕ್ರೀನ್ ಶಾಟ್ ತೆಗೆಯುವ ಸೌಲಭ್ಯವನ್ನು ತೆಗೆದು ಹಾಕಿರುವ ಸಂಸ್ಥೆ ಇದೀಗ ಮತ್ತೊಂದು ಫೀಚರ್ ಅನ್ನು ತರುತ್ತಿದೆ. ಈ ಮೂಲಕ ಕೇವಲ ಮೊಬೈಲ್ ನಂಬರ್ ಬಳಸುವ ಬದಲು ಕೇವಲ 'ಯೂಸರ್ ನೇಮ್'ನೊಂದಿಗೆ ಸಂದೇಶಗಳನ್ನು ಕಳುಹಿಸಲು ಅವಕಾಶವಿದೆ.
ಪಿನ್ ಕಡ್ಡಾಯ: ಅನೇಕ ಜನರು ತಾವು ಭೇಟಿಯಾದ ಅಪರಿಚಯಸ್ಥರಿಗೆ ತಮ್ಮ ಫೋನ್ ಸಂಖ್ಯೆಯನ್ನು ನೀಡಲು ಹಿಂಜರಿಯುತ್ತಾರೆ. ಮೊಬೈಲ್ ನಂಬರ್ ಕೊಟ್ಟರೆ ಮುಂದೆ ತೊಂದರೆ ಎದುರಿಸಬೇಕಾಗುತ್ತದೆ ಎಂದು ಭಯ ಪಡುತ್ತಾರೆ. ಸದ್ಯ ವಾಟ್ಸಾಪ್ ತರುತ್ತಿರುವ 'ಯೂಸರ್ ನೇಮ್' ಫೀಚರ್ನಿಂದ ಇನ್ನು ಮುಂದೆ ಇಂತಹ ಸಮಸ್ಯೆಗಳು ಎದುರಾಗುವುದಿಲ್ಲ. ಇದರರ್ಥ ನೀವು ಹೊಸ ಜನರೊಂದಿಗೆ ಸಂವಹನ ನಡೆಸಲು ಬಯಸಿದರೆ, ನೀವು ಫೋನ್ ಸಂಖ್ಯೆಯ ಬದಲಿಗೆ ಬಳಕೆದಾರರ ಹೆಸರನ್ನು ಮಾತ್ರ ನೀಡಬೇಕಾಗುತ್ತದೆ. ಯೂಸರ್ ನೇಮ್ ತಿಳಿದ್ರೆ ಯಾರಿಗಾದರೂ ಮೆಸ್ಸೇಜ್ ಮಾಡುವ ಅವಕಾಶ ಇರುತ್ತದೆ ಎಂದು ನೀವು ಭಾವಿಸುತ್ತೀರಾ?.. ಅಂಥದ್ದೇನೂ ಇಲ್ಲ. ಏಕೆಂದರೆ ಅಪರಿಚಯಸ್ಥರೊಂದಿಗೆ ಮೊದಲ ಬಾರಿಗೆ ಮಾತನಾಡಲು, ನೀವು 'ಯೂಸರ್ ನೇಮ್' ಜೊತೆಗೆ ನಿಮ್ಮ ಪಿನ್ ಸಂಖ್ಯೆಯನ್ನು ನಮೂದಿಸಬೇಕು.
ಪಿನ್ ಅನ್ನು ಕ್ರಿಯೇಟ್ ಮಾಡಬೇಕು: ವಾಟ್ಸಾಪ್ ತಂದಿರುವ ಈ ಹೊಸ ಫೀಚರ್ನಲ್ಲಿ ಯೂಸರ್ ನೇಮ್ ಜೊತೆಗೆ ನಾಲ್ಕು ಅಂಕಿಗಳ ಪಿನ್ ಕ್ರಿಯೇಟ್ ಮಾಡಬೇಕು. ಈಗಾಗಲೇ ಸಂವಹನ ನಡೆಸುತ್ತಿರುವವರ ಜೊತೆ ಪಿನ್ ಅನ್ನು ಪ್ರತ್ಯೇಕವಾಗಿ ನಮೂದಿಸಬೇಕಾಗಿಲ್ಲ. ಬಳಕೆದಾರರ ಭದ್ರತೆ ಉದ್ದೇಶದಿಂದ ಅಪರಿಚಿತರಿಂದ ಬರುವ ಸಂದೇಶಗಳನ್ನು ನಿಯಂತ್ರಿಸಲು WhatsApp ಈ ವೈಶಿಷ್ಟ್ಯವನ್ನು ತರುತ್ತಿದೆ. ಪ್ರಸ್ತುತ, ಈ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿ ಹಂತದಲ್ಲಿದೆ ಮತ್ತು ಶೀಘ್ರದಲ್ಲೇ ಬಳಕೆಗೆ ಬರಲಿದೆ ಎಂದು ವಾಟ್ಸಾಪ್ ಕುರಿತು ಅಪ್ಡೇಟ್ ಒದಗಿಸುವ Wabeta ಇನ್ಫೋ ತನ್ನ ಬ್ಲಾಗ್‌ನಲ್ಲಿ ಬಹಿರಂಗಪಡಿಸಿದೆ.
ಇನ್ಮುಂದೆ ಆ ಸಂದೇಶಗಳಿಗೆ ಅವಕಾಶವಿಲ್ಲ: ಈ ಹಿಂದೆ ಸ್ಪ್ಯಾಮ್ ಕರೆಗಳನ್ನು ತಡೆಯಲು ವಾಟ್ಸಾಪ್ 'ಸೈಲೆನ್ಸ್ ಅನ್ನೌನ್ ಕಾಲರ್ಸ್' ಎಂಬ ಫೀಚರ್ ಅನ್ನು ಪರಿಚಯಿಸಿತ್ತು. ಅಂತೆಯೇ, ಅಪರಿಚಿತರಿಂದ ಸಂದೇಶಗಳನ್ನು ತಡೆಯಲು ಇತ್ತೀಚಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅದರ ಭಾಗವಾಗಿ ಅಪರಿಚಿತರಿಂದ ಬರುವ ಸಂದೇಶಗಳನ್ನು ವಾಟ್ಸಾಪ್ ಖಾತೆಗೆ ತಾತ್ಕಾಲಿಕವಾಗಿ ನಿರ್ಬಂಧಿಸುವ ಸೌಲಭ್ಯವನ್ನು ತರಲಾಗುವುದು. ಇದರಿಂದ ಬಳಕೆದಾರರು ಹೆಚ್ಚು ಸುರಕ್ಷಿತವಾಗಿರಬಹುದು ಎಂದು ವಾಟ್ಸಾಪ್ ಹೇಳಿದೆ. ವಾಟ್ಸಾಪ್ ಸ್ಟೇಟಸ್‌ನಲ್ಲಿ ಪೋಸ್ಟ್ ಮಾಡಿದ ಫೋಟೋಗಳು, ವೀಡಿಯೊಗಳು ಮತ್ತು ಪಠ್ಯ ಕಥೆಗಳನ್ನು ಲೈಕ್ ಮಾಡುವ ಸೌಲಭ್ಯವನ್ನು ತರಲು ಇದು ಪ್ರಯತ್ನಗಳನ್ನು ಪ್ರಾರಂಭಿಸಿದೆ.