ಡೆಹ್ರಾಡೂನ್ (ಉತ್ತರಾಖಂಡ): ಟಾಟಾ ಗ್ರೂಪ್ ತಮಿಳುನಾಡು ಮತ್ತು ಕರ್ನಾಟಕದ ತನ್ನ ಕಂಪನಿಗಳಲ್ಲಿ ಉತ್ತರಾಖಂಡದ 4,000 ಮಹಿಳೆಯರಿಗೆ ಉದ್ಯೋಗ ನೀಡಲಿದೆ. ಟಾಟಾ ಗ್ರೂಪ್ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ರಂಜನ್ ಬಂಡೋಪಾಧ್ಯಾಯ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಅಷ್ಟೇ ಅಲ್ಲ ಅವರು ರಾಜ್ಯ ಯೋಜನಾ ಇಲಾಖೆಗೆ ಈ ಕುರಿತು ಪತ್ರ ಬರೆದಿದ್ದಾರೆ ಎಂದು ಅಧಿಕೃತ ಪ್ರಕಟಣೆಯ ಮೂಲಕ ತಿಳಿದು ಬಂದಿದೆ.
ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಉತ್ತರಾಖಂಡದ ನಾಲ್ಕು ಸಾವಿರ ಮಹಿಳಾ ಅಭ್ಯರ್ಥಿಗಳನ್ನು ತಮಿಳುನಾಡಿನ ಹೊಸೂರು ಮತ್ತು ಕರ್ನಾಟಕದ ಕೋಲಾರದಲ್ಲಿರುವ ತನ್ನ ಸ್ಥಾವರಗಳಲ್ಲಿ NPS ಮತ್ತು NATS ಕಾರ್ಯಕ್ರಮಗಳ ಅಡಿ ನೇಮಿಸಿಕೊಳ್ಳಲಿದೆ. ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.
10 ಅಥವಾ 12 ನೇ ತರಗತಿ ಪರೀಕ್ಷೆಗಳಲ್ಲಿ ತೇರ್ಗಡೆಯಾದವರು ಎನ್‌ಪಿಎಸ್ ಕಾರ್ಯಕ್ರಮಗಳಿಗೆ ಅರ್ಹರಾಗಿರುತ್ತಾರೆ. ಆದರೆ NATS ಗೆ ಇವುಗಳ ಜೊತೆಗೆ ITI ಡಿಪ್ಲೊಮಾ ಅಗತ್ಯವಾಗಿದೆ. ಆಯ್ಕೆಯ ನಂತರ, ಅವರನ್ನು ಶಾಪ್ ಫ್ಲೋರ್ ತಂತ್ರಜ್ಞರನ್ನಾಗಿ ನೇಮಿಸಲಾಗುತ್ತದೆ. ನಿಗದಿತ ವೇತನದ ಹೊರತಾಗಿ ವಸತಿ, ಆಹಾರ, ಸಾರಿಗೆ ಮತ್ತು ಇತರ ಸೌಲಭ್ಯಗಳನ್ನು ಸಹ ಪಡೆಯುತ್ತಾರೆ ಎಂದು ಕಂಪನಿ ಪ್ರಕಟನೆ ಮೂಲಕ ತಿಳಿಸಿದೆ.