ನವದೆಹಲಿ : ನಾಸಾದ ಬೋಯಿಂಗ್ ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆಯು ಗುರುವಾರ ಸುರಕ್ಷಿತವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಲಂಗರು ಹಾಕಿದೆ. ನೌಕೆಯಲ್ಲಿದ್ದ ಭಾರತೀಯ - ಅಮೆರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್ ನೌಕೆಯ ಕ್ಯಾಪ್ಸೂಲ್ನಿಂದ ಬಾಹ್ಯಾಕಾಶ ನಿಲ್ದಾಣದ ಒಳಗೆ ಹೋಗುತ್ತಿದ್ದಂತೆ ಖುಷಿಯಿಂದ ಡಾನ್ಸ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಇವರ ಜೊತೆಗೆ ಮತ್ತೋರ್ವ ಗಗನಯಾತ್ರಿ ಬುಚ್ ವಿಲ್ಮೋರ್ ಕೂಡ ಬಾಹ್ಯಾಕಾಶ ನಿಲ್ದಾಣದೊಳಗೆ ಪ್ರವೇಶಿಸಿದರು.
ಈ ಮೂಲಕ ಸುನೀತಾ ವಿಲಿಯಮ್ಸ್ ಅವರು ಹೊಸ ಬಾಹ್ಯಾಕಾಶ ನೌಕೆಯೊಂದನ್ನು ಪೈಲಟ್ ಆಗಿ ಅದರ ಪ್ರಥಮ ಪರೀಕ್ಷಾರ್ಥ ಹಾರಾಟ ನಡೆಸಿದ ವಿಶ್ವದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
58 ವರ್ಷದ ಸುನೀತಾ ಹಾಗೂ ವಿಲ್ಮೋರ್ ಜೂನ್ 5 ರಂದು ಫ್ಲೋರಿಡಾದ ಕೇಪ್ ಕೆನವೆರಾಲ್ನಿಂದ ಉಡಾವಣೆಯಾದ ಬೋಯಿಂಗ್ ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆಯ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿದ್ದಾರೆ. ಬೋಯಿಂಗ್ ಸ್ಪೇಸ್ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಸುನೀತಾ ಕ್ಯಾಪ್ಸೂಲ್ನಿಂದ ಹೊರಗೆ ಬರುತ್ತಿರುವುದು ಕಾಣಿಸುತ್ತದೆ. ಹೊರಬರುತ್ತಿರುವಂತೆಯೇ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಕೆಲ ಹೊತ್ತು ನೃತ್ಯ ಮಾಡಿದ ಅವರು, ಐಎಸ್ಎಸ್ನಲ್ಲಿರುವ ಇತರ ಗಗನಯಾತ್ರಿಗಳನ್ನು ತಬ್ಬಿಕೊಂಡು ತಮ್ಮ ಖುಷಿಯನ್ನು ವ್ಯಕ್ತಪಡಿಸಿರುವುದು ಕಾಣಿಸುತ್ತದೆ.
ಬೋಯಿಂಗ್ ಕ್ರೂ ಫ್ಲೈಟ್ ಟೆಸ್ಟ್ (ಸಿಎಫ್ಟಿ) ಎಂದು ಕರೆಯಲ್ಪಡುವ ಈ ಮಿಷನ್, ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮದ (Commercial Crew Program) ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ನಿಯಮಿತವಾಗಿ ಸಿಬ್ಬಂದಿಯನ್ನು ಕಳುಹಿಸಲು ಸ್ಟಾರ್ ಲೈನರ್ ನೌಕೆಯು ಅರ್ಹವಾಗಿದೆ ಎಂದು ಪ್ರಮಾಣೀಕರಿಸುವಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ. ಇದು ಯಶಸ್ವಿಯಾದರೆ, ಸ್ಟಾರ್ ಲೈನರ್ ಗಗನಯಾತ್ರಿಗಳನ್ನು ಕಕ್ಷೆಯಲ್ಲಿರುವ ಪ್ರಯೋಗಾಲಯಕ್ಕೆ ಮತ್ತು ಅಲ್ಲಿಂದ ಮರಳಿ ಕರೆ ತರುವ ಎರಡನೇ ಖಾಸಗಿ ಬಾಹ್ಯಾಕಾಶ ನೌಕೆಯಾಗಲಿದೆ. ಸ್ಪೇಸ್ ಎಕ್ಸ್ ನ ಕ್ರೂ ಡ್ರ್ಯಾಗನ್ (Crew Dragon) ಈಗಾಗಲೇ ಈ ಕಾರ್ಯಾಚರಣೆಗೆ ಅರ್ಹತೆ ಪಡೆದುಕೊಂಡಿದೆ.
ಈ ಮುನ್ನ ಎರಡು ಬಾರಿ ಬಾಹ್ಯಾಕಾಶ ಯಾನ ಕೈಗೊಂಡಿರುವ ಸುನೀತಾ ವಿಲಿಯಮ್ಸ್ ಕಕ್ಷೆಯಲ್ಲಿ ಒಟ್ಟು 322 ದಿನಗಳನ್ನು ಕಳೆದಿದ್ದಾರೆ. ಈ ಹಾರಾಟದ ಅನುಭವವು ಅವರ ಜೀವನದ ಮಹತ್ಸಾಧನೆಯನ್ನು ಸೂಚಿಸುತ್ತದೆ. ಈ ಹಿಂದೆ 2006-2007 ಮತ್ತು 2012ರಲ್ಲಿ ಐಎಸ್ಎಸ್ನಲ್ಲಿ ಇದ್ದಾಗ ಮಹಿಳೆಯೊಬ್ಬಳು ಅತಿ ಹೆಚ್ಚು ಬಾಹ್ಯಾಕಾಶ ನಡಿಗೆ (ಏಳು) ಮತ್ತು ಬಾಹ್ಯಾಕಾಶ ನಡಿಗೆ ಸಮಯ (50 ಗಂಟೆ, 40 ನಿಮಿಷ)ದ ದಾಖಲೆ ನಿರ್ಮಿಸಿದ್ದರು.
ವಿಲಿಯಮ್ಸ್, ವಿಲ್ಮೋರ್ ಮತ್ತು 500 ಪೌಂಡ್ ಸರಕುಗಳನ್ನು ಹೊತ್ತೊಯ್ದಿರುವ ಸ್ಟಾರ್ ಲೈನರ್ ಕ್ಯಾಪ್ಸೂಲ್ ಸುಮಾರು 26 ಗಂಟೆಗಳ ಕಾಲ ಐಎಸ್ಎಸ್ನೊಂದಿಗೆ ಲಂಗರು ಹಾಕಿದ ಸ್ಥಿತಿಯಲ್ಲಿಯೇ ಇರಲಿದೆ. ಇಬ್ಬರೂ ಗಗನಯಾತ್ರಿಗಳು ಒಂದು ವಾರ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಇರಲಿದ್ದು, ಸ್ಟಾರ್ ಲೈನರ್ ನೌಕೆಯ ವ್ಯವಸ್ಥೆಗಳನ್ನು ಪರೀಕ್ಷಿಸಿ ಪ್ರಮಾಣೀಕರಿಸಲಿದ್ದಾರೆ. ನಂತರ ಅದೇ ನೌಕೆಯ ಮೂಲಕ ಭೂಮಿಗೆ ಮರಳಿ ಪಶ್ಚಿಮ ಯುಎಸ್ನ ಪ್ರದೇಶವೊಂದರಲ್ಲಿ ಪ್ಯಾರಾಚೂಟ್ ನೆರವಿನಿಂದ ಲ್ಯಾಂಡ್ ಆಗಲಿದ್ದಾರೆ.
ಇದನ್ನೂ ಓದಿ : ನಾಸಾದ ಮಾನವಸಹಿತ ಬೋಯಿಂಗ್ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆ ಯಶಸ್ವಿ ಉಡಾವಣೆ - Boeing Starliner Successfully Launched