ಎಸ್ಎಂಎಸ್ ಮೂಲ ಪತ್ತೆ ವ್ಯವಸ್ಥೆ ಅಳವಡಿಕೆ ಯಶಸ್ವಿ; ಸ್ಪ್ಯಾಮ್ ಮೆಸೇಜುಗಳ ತಡೆಗೆ ಟ್ರಾಯ್ ಕ್ರಮ - SMS TRACEABILITY
ಎಸ್ಎಂಎಸ್ ಮೂಲ ಹಚ್ಚುವಂಥ ವ್ಯವಸ್ಥೆಯನ್ನು ಟ್ರಾಯ್ ಯಶಸ್ವಿಯಾಗಿ ಅಳವಡಿಸಿದೆ.
Published : Dec 19, 2024, 8:08 PM IST
ನವದೆಹಲಿ: ಎಲ್ಲಾ ವಾಣಿಜ್ಯ ಎಸ್ಎಂಎಸ್ಗಳ ಮೂಲವನ್ನು ಪತ್ತೆಹಚ್ಚಲು ಸಾಧ್ಯವಾಗುವಂಥ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದ್ದು, ಇದು ಸುರಕ್ಷಿತ ಮತ್ತು ಸ್ಪ್ಯಾಮ್ ಮುಕ್ತ ಮೆಸೇಜಿಂಗ್ ವ್ಯವಸ್ಥೆಯನ್ನು ಸೃಷ್ಟಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಗುರುವಾರ ತಿಳಿಸಿದೆ.
ಈ ಚೌಕಟ್ಟಿನಡಿಯಲ್ಲಿ, ವ್ಯವಹಾರಗಳು, ಬ್ಯಾಂಕುಗಳು ಮತ್ತು ಸರ್ಕಾರಿ ಏಜೆನ್ಸಿಗಳಂತಹ ಎಲ್ಲಾ ಪ್ರಮುಖ ಘಟಕಗಳು (ಪಿಇಗಳು) ತಮ್ಮ ಟೆಲಿಮಾರ್ಕೆಟರ್ ಗಳೊಂದಿಗೆ (ಟಿಎಂಗಳು) ಬ್ಲಾಕ್ ಚೈನ್ ಆಧಾರಿತ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ಟೆಕ್ನಾಲಜಿ (ಡಿಎಲ್ ಟಿ) ಮೂಲಕ ತಮ್ಮ ಸಂದೇಶ ಪ್ರಸರಣ ಮಾರ್ಗಗಳನ್ನು ಘೋಷಿಸುವುದು ಮತ್ತು ನೋಂದಾಯಿಸುವುದು ಕಡ್ಡಾಯವಾಗಿದೆ.
ಈ ಚೈನ್ ಡಿಕ್ಲರೇಷನ್ ಮತ್ತು ಬೈಂಡಿಂಗ್ ಪ್ರಕ್ರಿಯೆಯು ಡೇಟಾ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳದೆ ಅಥವಾ ಎಸ್ಎಂಎಸ್ ಕಳುಹಿಸುವಿಕೆಯಲ್ಲಿ ವಿಳಂಬವಿಲ್ಲದೆ ಪ್ರತಿ ಸಂದೇಶದ ಮೂಲದಿಂದ ಅದು ತಲುಪುವುದರವರೆಗೆ ಎಂಡ್-ಟು-ಎಂಡ್ ಪತ್ತೆಹಚ್ಚುವಿಕೆಯನ್ನು ಖಚಿತಪಡಿಸುತ್ತದೆ ಎಂದು ಟ್ರಾಯ್ ಹೇಳಿದೆ. ಇದನ್ನು ಕಾರ್ಯಗತಗೊಳಿಸಲು ಟ್ರಾಯ್ ಆಗಸ್ಟ್ 20, 2024 ರಂದು ನಿರ್ದೇಶನವನ್ನು ಹೊರಡಿಸಿ, ನವೆಂಬರ್ 1, 2024 ರಿಂದ ಎಲ್ಲಾ ವಾಣಿಜ್ಯ ಸಂದೇಶಗಳ ಪತ್ತೆಹಚ್ಚುವಿಕೆಯನ್ನು ಕಡ್ಡಾಯಗೊಳಿಸಿದೆ.
ಹೊಸ ವ್ಯವಸ್ಥೆಯನ್ನು ಅಳವಡಿಸುವಿಕೆಯಲ್ಲಿನ ದೊಡ್ಡ ಮಟ್ಟದ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಟ್ರಾಯ್ ಬ್ಯಾಂಕಿಂಗ್, ವಿಮೆ, ಆರೋಗ್ಯ ಮತ್ತು ರಿಯಲ್ ಎಸ್ಟೇಟ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಸುಮಾರು 1.13 ಲಕ್ಷ ಸಕ್ರಿಯ ಪಿಇಗಳನ್ನು ಸುಗಮವಾಗಿ ಆನ್ ಬೋರ್ಡಿಂಗ್ ಮಾಡಲು ಸಾಧ್ಯವಾಗುವಂತೆ ಅನುಸರಣೆ ಗಡುವನ್ನು ಮೊದಲು ನವೆಂಬರ್ 30 ರವರೆಗೆ ಮತ್ತು ನಂತರ ಡಿಸೆಂಬರ್ 10 ರವರೆಗೆ ವಿಸ್ತರಿಸಿತ್ತು.
ಹೊಸ ವ್ಯವಸ್ಥೆಯ ಜಾರಿಗಾಗಿ ಆರ್ ಬಿಐ, ಸೆಬಿ, ಐಆರ್ಡಿಎಐ, ಪಿಎಫ್ಆರ್ಡಿಎ ಮತ್ತು ಸರ್ಕಾರಿ ಸಂಸ್ಥೆಗಳಾದ ಎನ್ಐಸಿ, ಸಿಡಿಎಸಿ ಮತ್ತು ರಾಜ್ಯ ಸರ್ಕಾರಗಳೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಟ್ರಾಯ್ ಸಹಯೋಗದ ವಿಧಾನವನ್ನು ಅಳವಡಿಸಿಕೊಂಡಿದೆ.
ಅಡೆತಡೆಗಳನ್ನು ಕಡಿಮೆ ಮಾಡಲು ಆರಂಭಿಕ ಜಾರಿ ಅವಧಿಯಲ್ಲಿ ಟ್ರಾಯ್ ಹೊಸ ಅನುಷ್ಠಾನ ಕಾರ್ಯತಂತ್ರವನ್ನು ಪರಿಚಯಿಸಿತು. ಚೈನ್ ಬೈಂಡಿಂಗ್ ನಿಯಮಗಳನ್ನು ತಾಂತ್ರಿಕವಾಗಿ ಜಾರಿಗೊಳಿಸಲಾಗಿದ್ದರೂ, ಅಗೋಚರ ಮಾರ್ಗಗಳ ಮೂಲಕ ಕಳುಹಿಸಲಾದ ಸಂದೇಶಗಳನ್ನು ತಾತ್ಕಾಲಿಕವಾಗಿ ಅನುಮತಿಸಿ ಅವುಗಳನ್ನು ಎರರ್ ಕೋಡ್ಗಳೊಂದಿಗೆ ಫ್ಲ್ಯಾಗ್ ಮಾಡಲಾಯಿತು.
ಒಟಿಪಿಗಳು ಅಥವಾ ಇತರ ಸಮಯ-ಸೂಕ್ಷ್ಮ ಸಂವಹನಗಳಂತಹ ಪ್ರಮುಖ ಮೆಸೇಜುಗಳ ರವಾನೆಯಲ್ಲಿ ಅಡ್ಡಿಯಾಗದಂತೆ ಸರಿಪಡಿಸುವ ಕ್ರಮಗಳನ್ನು ಸಕ್ರಿಯಗೊಳಿಸಲು ಈ ಎರರ್ ಕೋಡ್ಗಳನ್ನು ಸಂಬಂಧಪಟ್ಟ ಪಿಇಗಳೊಂದಿಗೆ ಹಂಚಿಕೊಳ್ಳಲಾಗಿದೆ. ಈ ಗ್ರಾಹಕ-ಕೇಂದ್ರಿತ ವಿಧಾನದಿಂದ ನಿಯಮಾವಳಿಗಳನ್ನು ಅನುಸರಿಸಿ ತಡೆರಹಿತ ಸಂದೇಶ ಸೇವೆಗಳನ್ನು ಮುಂದುವರಿಸಲು ಸಾಧ್ಯವಾಗಿದೆ. ಡಿಸೆಂಬರ್ 11 ರಿಂದ ಜಾರಿಗೆ ಬರುವಂತೆ, ನೋಂದಣಿಯಾಗದ ಮಾರ್ಗಗಳ ಮೂಲಕ ಕಳುಹಿಸಲಾದ ಎಸ್ಎಂಎಸ್ ಗಳನ್ನು ತಡೆಹಿಡಿಯಲಾಗುತ್ತಿದೆ.
ಇದನ್ನೂ ಓದಿ : 'ಪಟಾಕಿ ನಿಷೇಧಿಸಿ'; ಯುಪಿ, ಹರಿಯಾಣ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚನೆ - BAN CRACKERS