ಚೆನ್ನೈ(ತಮಿಳುನಾಡು): ಸ್ಯಾಮ್‌ಸಂಗ್ ಇಂಡಿಯಾದ ಚೆನ್ನೈ ಘಟಕದಲ್ಲಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ 15ನೇ ದಿನಕ್ಕೆ ಕಾಲಿಟ್ಟಿದ್ದು, ಎಲೆಕ್ಟ್ರಾನಿಕ್ಸ್ ಸಾಧನಗಳ ಉತ್ಪಾದನೆಗೆ ಅಡಚಣೆಯಾಗಿದೆ. ಕಂಪನಿ ಶೋಕಾಸ್ ನೋಟಿಸ್ ನೀಡಿದ ನಂತರ ಕೆಲವು ಕಾರ್ಮಿಕರು ಕೆಲಸಕ್ಕೆ ಮರಳುತ್ತಿದ್ದಾರೆ. ಕೆಲಸಕ್ಕೆ ಮರಳದೇ ಇದ್ದರೆ ವೇತನ ತಡೆಹಿಡಿಯಲಾಗುವುದು ಎಂದು ಕಂಪನಿ ಎಚ್ಚರಿಸಿದೆ.
'ನೋ ವರ್ಕ್, ನೋ ಪೇ' ನೀತಿಯನ್ವಯ ಅಕ್ರಮ ಮುಷ್ಕರದ ಅವಧಿಗೆ ಕಾರ್ಮಿಕರಿಗೆ ವೇತನ ನೀಡಲಾಗುವುದಿಲ್ಲ ಎಂದು ಕಂಪನಿ ಶೋಕಾಸ್ ನೋಟಿಸ್‌ನಲ್ಲಿ ತಿಳಿಸಿದೆ. ಎಲ್ಲ ಸಮಸ್ಯೆಗಳನ್ನು ಚರ್ಚೆಗಳ ಮೂಲಕ ಪರಿಹರಿಸಬಹುದು. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ನೀವು ಕೆಲಸಕ್ಕೆ ಹಾಜರಾಗಬೇಕು ಹಾಗು ಶೋಕಾಸ್ ನೋಟಿಸ್‌ಗೆ ನಾಲ್ಕು ದಿನಗಳಲ್ಲಿ ಉತ್ತರಿಸಬೇಕು. ಇಲ್ಲದೇ ಇದ್ದಲ್ಲಿ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ವೇತನ ಹೆಚ್ಚಳ, ಯೂನಿಯನ್ ಮಾನ್ಯತೆ ಮತ್ತು 8 ಗಂಟೆಗಳ ಕೆಲಸ ಸೇರಿದಂತೆ ತಮ್ಮ ಇತರೆ ಬೇಡಿಕೆಗಳನ್ನು ಜಾರಿಗೆ ತರಬೇಕು ಎಂದು ಸೆಪ್ಟಂಬರ್ 9ರಿಂದ ಒಂದು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆಯ ಆರಂಭದಲ್ಲಿ ಟೆಲಿವಿಷನ್‌ಗಳು, ರೆಫ್ರಿಜರೇಟರ್‌ಗಳು ಮತ್ತು ವಾಷಿಂಗ್ ಮಷಿನ್‌ಗಳಂತಹ ಗ್ರಾಹಕ ಸರಕುಗಳ ಉತ್ಪಾದನೆಗೆ ತೊಂದರೆಯಾಗಿತ್ತು. ಪ್ರತಿಭಟನೆಯ ಪರಿಣಾಮ ಸದ್ಯ ಕಡಿಮೆಯಾಗಿದೆ ಮತ್ತು ಈ ವಾರದಿಂದ ಉತ್ಪಾದನೆ ಸಾಮಾನ್ಯ ಮಟ್ಟದಲ್ಲಿರುತ್ತದೆ ಎಂದು ಕಂಪನಿ ನಿರೀಕ್ಷಿಸುತ್ತಿದೆ.
"ನಮ್ಮ ಕಾರ್ಮಿಕರ ಕಲ್ಯಾಣ ನಮ್ಮ ಪ್ರಮುಖ ಆದ್ಯತೆ. ಯಾವುದೇ ಕುಂದುಕೊರತೆಗಳನ್ನು ಪರಿಹರಿಸಲು ನಾವು ಸಿದ್ಧವಿದ್ದೇವೆ. ಹಬ್ಬದ ಸೀಸನ್‌ಗೆ ಮುಂಚಿತವಾಗಿ ನಮ್ಮ ಗ್ರಾಹಕರಿಗೆ ಯಾವುದೇ ಅಡ್ಡಿಯಾಗದು" ಎಂದು ಸ್ಯಾಮ್‌ಸಂಗ್ ಹೇಳಿದೆ.
ಇನ್ನು, ಪೊಲೀಸರು ಪ್ರತಿಭಟನೆ ನಿಲ್ಲಿಸಿದರೆ ಕಾರ್ಮಿಕರು ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ತಮಿಳುನಾಡು ಹೇಳಿದೆ.
ಇದನ್ನೂ ಓದಿ: OnePlus, Samsung ಸೇರಿದಂತೆ ಈ ಫೋನ್‌ಗಳಿಗೆ ಅಮೆಜಾನ್ ಬಿಗ್ ಆಫರ್! - Amazon Offers On Smartphones