ವಾಶಿಂಗ್ಟನ್: ಭೂಮಿಯ ಕೆಳ ಕಕ್ಷೆಯಲ್ಲಿರುವ ಇತರ ಉಪಗ್ರಹಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯವಿರುವ ಬಾಹ್ಯಾಕಾಶ ಶಸ್ತ್ರಾಸ್ತ್ರವೊಂದನ್ನು ರಷ್ಯಾ ಉಡಾಯಿಸಿದೆ ಎಂದು ಅಮೆರಿಕ ಪ್ರತಿಪಾದಿಸಿದೆ. ಅಮೆರಿಕದ ಪೆಂಟಗನ್ ವಕ್ತಾರ ಪ್ಯಾಟ್ರಿಕ್ ರೈಡರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೇ 16 ರಂದು ಈ ಶಸ್ತ್ರಾಸ್ತ್ರದ ಉಡಾವಣೆ ನಡೆದಿದೆ ಮತ್ತು ರಷ್ಯಾದ ಈ ಶಸ್ತ್ರಾಸ್ತ್ರ ಉಪಗ್ರಹವು ಸದ್ಯ ಯುಎಸ್ ಸರ್ಕಾರದ ಉಪಗ್ರಹ ಸುತ್ತುತ್ತಿರುವ ಕಕ್ಷೆಯಲ್ಲಿಯೇ ಇದೆ ಎಂದು ರೈಡರ್ ಹೇಳಿದರು.
ರಷ್ಯಾದ ಉಪಗ್ರಹದಿಂದ ಯುಎಸ್ ಉಪಗ್ರಹಕ್ಕೆ ಅಪಾಯ ಎದುರಾಗಿದೆಯಾ ಎಂಬ ಪ್ರಶ್ನೆಗೆ "ಒಂದಂತೂ ನಿಜ.. ಅದು ಬಾಹ್ಯಾಕಾಶ ರಕ್ಷಣಾ ಶಸ್ತ್ರಾಸ್ತ್ರವಾಗಿದ್ದು, ಅಮೆರಿಕದ ಸರ್ಕಾರಿ ಉಪಗ್ರಹದ ಕಕ್ಷೆಯಲ್ಲಿಯೇ ಸುತ್ತುತ್ತಿದೆ." ಎಂದರು.
ಅಮೆರಿಕದ ಯುಎನ್ ಪ್ರತಿನಿಧಿ ರಾಬರ್ಟ್ ವುಡ್ ಕೂಡ ಈ ಹಿಂದೆ ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. 2019 ಮತ್ತು 2022ರಲ್ಲಿನ ಘಟನೆಗಳನ್ನು ಉಲ್ಲೇಖಿಸಿರುವ ಪೆಂಟಗನ್, ರಷ್ಯಾ ಇಂತಹ ಬಾಹ್ಯಾಕಾಶ ಶಸ್ತ್ರಾಸ್ತ್ರಗಳನ್ನು ಉಡಾವಣೆ ಮಾಡುತ್ತಿರುವುದು ಇದೇ ಮೊದಲಲ್ಲ ಎಂದು ಹೇಳಿದೆ.
ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಯ ವಿರುದ್ಧ ರಷ್ಯಾ ಮಂಡಿಸಿದ ವಿಶ್ವಸಂಸ್ಥೆಯ ನಿರ್ಣಯ ಸೋಮವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವಿಫಲವಾಗಿರುವುದು ಇಲ್ಲಿ ಗಮನಾರ್ಹ. ಕರಡು ನಿರ್ಣಯದ ಪರವಾಗಿ ಏಳು ಮತಗಳು ಬಿದ್ದರೆ, ಯುಎಸ್ ಸೇರಿದಂತೆ ಏಳು ದೇಶಗಳು ವಿರುದ್ಧವಾಗಿ ಮತ ಚಲಾಯಿಸಿದವು.
ಕಳೆದ ತಿಂಗಳು ಬಾಹ್ಯಾಕಾಶದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ವಿರುದ್ಧ ಯುಎಸ್ ನಿರ್ಣಯವನ್ನು ರಷ್ಯಾ ವೀಟೋ ಮಾಡಿದ ನಂತರ ಮಾಸ್ಕೋ ಕುತಂತ್ರದ ತಂತ್ರಗಳನ್ನು ಬಳಸುತ್ತಿದೆ ಎಂದು ಯುಎಸ್ ಪ್ರತಿನಿಧಿ ರಾಬರ್ಟ್ ವುಡ್ ಆರೋಪಿಸಿದ್ದಾರೆ.
ಬಾಹ್ಯಾಕಾಶದಲ್ಲಿ ರಷ್ಯಾದ ಪರಮಾಣು ಕಾರ್ಯಾಚರಣೆಗಳ ಬಗ್ಗೆ ಫೆಬ್ರವರಿಯಲ್ಲಿಯೇ ಅಮೆರಿಕ ವರದಿ ಮಾಡಿತ್ತು. ತನ್ನ ಉಪಗ್ರಹಗಳ ವಿರುದ್ಧ ನಿರ್ದೇಶಿಸಲಾದ ಶಸ್ತ್ರಾಸ್ತ್ರಗಳ ಪರಮಾಣು ಸಾಮರ್ಥ್ಯವು ಅಮೆರಿಕದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಯುಎಸ್ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧ್ಯಕ್ಷ ಜೋ ಬೈಡನ್, ಸದ್ಯಕ್ಕೆ ಅಮೆರಿಕ ಅಥವಾ ವಿಶ್ವದ ಯಾವುದೇ ಭಾಗಕ್ಕೂ ಪರಮಾಣು ಅಪಾಯವಿಲ್ಲ ಎಂದು ಭರವಸೆ ನೀಡಿದರು.
ಈ ವರದಿಗಳ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರತಿಕ್ರಿಯಿಸಿದ್ದು, ಬಾಹ್ಯಾಕಾಶದಲ್ಲಿ ಪರಮಾಣು ಶಸ್ತ್ರಾಸ್ತ್ರ ನಿಯೋಜಿಸುವುದನ್ನು ರಷ್ಯಾ ವಿರೋಧಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ : ಹಣ್ಣು ಮಾಗಿಸಲು ನಿಷೇಧಿತ ಕ್ಯಾಲ್ಸಿಯಂ ಕಾರ್ಬೈಡ್ ಬಳಸುವಂತಿಲ್ಲ: ಎಫ್ಎಸ್ಎಸ್ಎಐ ಎಚ್ಚರಿಕೆ - FRUIT RIPENING