Rail Force One: ಪ್ರಧಾನಿ ನರೇಂದ್ರ ಮೋದಿ ಸದ್ಯ ವಿದೇಶಿ ಪ್ರವಾಸದಲ್ಲಿರುವುದು ಗೊತ್ತಿರುವ ಸಂಗತಿ. ಪೋಲೆಂಡ್ ನಂತರ, ಈಗ ಪ್ರಧಾನಿ ಮೋದಿ ಆಗಸ್ಟ್ 23 ರಂದು ನೇರವಾಗಿ ಉಕ್ರೇನ್‌ಗೆ ತೆರಳಿದ್ದಾರೆ. ಆದರೆ ಮೋದಿ ಪೋಲೆಂಡ್‌ನಿಂದ ಉಕ್ರೇನ್‌ಗೆ ಹೋಗಿರುವುದು ವಿಮಾನದಲ್ಲಿ ಅಲ್ಲ. ಬದಲಾಗಿ ವಿಶೇಷ ರೈಲಿನಲ್ಲಿ ಅನ್ನೋದು ವಿಶೇಷ.
ಈ ರೈಲು ಮಾಮೂಲಿ ರೈಲಲ್ಲ. ಇದು ಐಷಾರಾಮಿ ಸೌಲಭ್ಯಗಳು ಮತ್ತು ವಿಶ್ವ ದರ್ಜೆಯ ಸೇವೆಗೆ ಹೆಸರುವಾಸಿಯಾಗಿದೆ. ಈ ವಿಶೇಷ ರೈಲನ್ನು ಟ್ರೈನ್ ಫೋರ್ಸ್ ಒನ್ ಎಂದು ಕರೆಯಲಾಗುತ್ತದೆ. ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ 7 ಗಂಟೆಗಳ ಕಾಲ ಕಳೆಯಲು, ಪ್ರಧಾನಿ ಮೋದಿ 20 ಗಂಟೆಗಳ ಕಾಲ ಟ್ರೈನ್ ಫೋರ್ಸ್ ಒನ್‌ನಲ್ಲಿ ಪ್ರಯಾಣಿಸಿರುವುದು ಗಮನಾರ್ಹ.
ರಷ್ಯಾದೊಂದಿಗಿನ ಯುದ್ಧದಿಂದಾಗಿ ಉಕ್ರೇನ್‌ನಲ್ಲಿ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ. ಉಕ್ರೇನ್‌ನಲ್ಲಿ ಅಪಾಯಕಾರಿ ರಸ್ತೆಗಳ ಕಾರಣ, ಪ್ರಸ್ತುತ ರೈಲಿನಲ್ಲಿ ಪ್ರಯಾಣಿಸುವುದು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಹೀಗಾಗಿ ಮೋದಿ ವಿಶೇಷ ರೈಲಿನಲ್ಲಿ ಪ್ರಯಾಣಿಸಿದ್ದಾರೆ.
ಟ್ರೈನ್ ಫೋರ್ಸ್ ಒನ್ ವಿಶೇಷತೆ ಏನು?: ಈ ರೈಲನ್ನು ಪ್ರವಾಸೋದ್ಯಮಕ್ಕಾಗಿ 2014 ರಲ್ಲಿ ಪ್ರಾರಂಭಿಸಲಾಯಿತು. ಆದರೆ ಈಗ ವಿಶ್ವ ನಾಯಕರ ಪ್ರಯಾಣಕ್ಕಾಗಿ ಬಳಸಲಾಗುತ್ತಿದೆ. ಉಕ್ರೇನ್‌ಗೆ ಹೋಗುವ ಹೆಚ್ಚಿನ ನಾಯಕರು, ಪತ್ರಕರ್ತರು ಮತ್ತು ರಾಜತಾಂತ್ರಿಕ ಅಧಿಕಾರಿಗಳು ಸುರಕ್ಷಿತವಾಗಿ ರೈಲ್ ಫೋರ್ಸ್ ಒನ್ ಮೂಲಕವೇ ಮಾತ್ರ ಪ್ರಯಾಣಿಸುತ್ತಾರೆ.
Highlights from a very special visit to Ukraine, a valued friend of India’s. pic.twitter.com/0LuQ6vm5Iw
— Narendra Modi (@narendramodi) August 23, 2024
ರೈಲಿನ ವೈಶಿಷ್ಟ್ಯಗಳೇನು?: ಉಕ್ರೇನ್‌ನ ರೈಲ್ ಫೋರ್ಸ್ ಒನ್ ರಾತ್ರಿಯಲ್ಲಿ ಮಾತ್ರ ಚಲಿಸುತ್ತದೆ. ಪೋಲೆಂಡ್‌ನಿಂದ ಕೀವ್‌ಗೆ 600 ಕಿಮೀ ದೂರವನ್ನು ಕ್ರಮಿಸಲು 10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಕ್ರೈಮಿಯಾದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ರೈಲ್ ಫೋರ್ಸ್ ಒನ್ ಅನ್ನು ಪ್ರಾರಂಭಿಸಲಾಯಿತು. ರಷ್ಯಾ ಕ್ರೈಮಿಯಾವನ್ನು ವಶಪಡಿಸಿಕೊಂಡ ಬಳಿಕ ಈ ರೈಲನ್ನು ವಿಶ್ವ ನಾಯಕರು ಮತ್ತು ವಿಐಪಿ ಅತಿಥಿಗಳ ಪ್ರಯಾಣಕ್ಕೆ ಬಳಸಲಾಗುತ್ತಿದೆ.
ರೈಲು ಸುಂದರವಾದ, ಆಧುನಿಕ ಒಳಾಂಗಣವನ್ನು ಹೊಂದಿದೆ. ಈ ಟ್ರೈನ್ ಒಂದು ರೀತಿ ಹಳಿಗಳ ಮೇಲೆ ಚಲಿಸುವ ಐಷಾರಾಮಿ ಹೋಟೆಲ್ನಂತೆ ಕಾಣುತ್ತದೆ. ಇದರಲ್ಲಿ ಸಭೆ ಮಾಡಲು ದೊಡ್ಡ ಟೇಬಲ್, ಐಷಾರಾಮಿ ಸೋಫಾ ಕೂಡ ಇದೆ. ಜೊತೆಗೆ ವಾಲ್ ಟಿವಿಗಳನ್ನು ಒಳಗೊಂಡಿದೆ. ನಿದ್ರೆ ಮತ್ತು ವಿಶ್ರಾಂತಿಗಾಗಿ ಆರಾಮದಾಯಕ ವ್ಯವಸ್ಥೆಯೂ ಇದೆ. ಅಲ್ಲದೆ, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ರೈಲಿನಲ್ಲಿ ಸುಧಾರಿತ ಭದ್ರತಾ ವ್ಯವಸ್ಥೆ ಕೂಡ ಅಳವಡಿಸಲಾಗಿದೆ.
ಬುಲೆಟ್ ಫ್ರೂಪ್ ಟ್ರೈನ್: ಶಸ್ತ್ರಸಜ್ಜಿತ ಕಿಟಕಿಗಳಿಂದ ಸುರಕ್ಷಿತ ಸಂವಹನ ವ್ಯವಸ್ಥೆಗಳವರೆಗೆ ರೈಲ್ ಫೋರ್ಸ್ ಒನ್ ಟ್ರೈನ್ ಅನ್ನು ಅತ್ಯಂತ ಸವಾಲಿನ ಸನ್ನಿವೇಶಗಳನ್ನು ಸಹ ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಇದು ಬುಲೆಟ್ ಮತ್ತು ಬಾಂಬ್ ಫ್ರೂಪ್ ರೈಲು. ಕಣ್ಗಾವಲು ವ್ಯವಸ್ಥೆ, ಸುರಕ್ಷಿತ ಸಂವಹನ ಜಾಲ ಮತ್ತು ಭದ್ರತಾ ಸಿಬ್ಬಂದಿಯ ತಂಡ ಸಹ ಇದರಲ್ಲಿದೆ.
ಈ ರೈಲಿನಲ್ಲಿ ಪ್ರಯಾಣಿಸಿದ ಮೊದಲ ವ್ಯಕ್ತಿ ಪ್ರಧಾನಿ ಮೋದಿ ಅಲ್ಲ. ಅನೇಕ ದೊಡ್ಡ ಗಣ್ಯರು ಮತ್ತು ರಾಜಕಾರಣಿಗಳು ಸಹ ಈ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮಾಕೊ, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಮತ್ತು ಆಗಿನ ಇಟಲಿ ಪ್ರಧಾನಿ ಈ ರೈಲಿನಲ್ಲಿ ಪ್ರಯಾಣಿಸಿದ್ದರು.