ಬೆಂಗಳೂರು: ಆಗಸ್ಟ್ 23ನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಎಂದು ಘೋಷಿಸಲಾಗಿದೆ. ಭಾರತದ ಮೊದಲ ಬಾಹ್ಯಾಕಾಶ ದಿನಾಚರಣೆ ಇಂದು ನಡೆಯಲಿದ್ದು, ಸಿದ್ಧತೆ ನಡೆದಿದೆ. ಕೇಂದ್ರ ಸರ್ಕಾರ ದೇಶದ ಬಾಹ್ಯಾಕಾಶ ಸಾಧನೆಗಳನ್ನು ಪ್ರದರ್ಶಿಸಲು ಮತ್ತು ಯುವ ಜನರಿಗೆ ಸ್ಫೂರ್ತಿ ತುಂಬಲು ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 23ನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ'ವೆಂದು ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಒಂದು ತಿಂಗಳ ಕಾಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಾಹ್ಯಾಕಾಶ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ತಿಳಿಸಿದ್ದಾರೆ.
ಭಾರತ್ ಮಂಡಪಂನಲ್ಲಿ ಎರಡು ದಿನಗಳ ಫಿನಾಲೆ: ನವದೆಹಲಿಯ ಭಾರತ್ ಮಂಡಪಂನಲ್ಲಿ 'ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ’ಯ ಅಂಗವಾಗಿ ಎರಡು ದಿನಗಳ ಕಾರ್ಯಕ್ರಮಗಳು ನಡೆಯಲಿವೆ. ಇದರಲ್ಲಿ ಅತ್ಯಂತ ಪ್ರಮುಖ ಸಂವಾದಾತ್ಮಕ ಪ್ರದರ್ಶನಗಳು ಮತ್ತು ಭಾರತದ ಬಾಹ್ಯಾಕಾಶ ಯಶಸ್ಸಿಗೆ ಸಂಬಂಧಿಸಿದ ಪ್ರಮುಖ ಭಾಷಣಗಳು, ಘೋಷಣೆಗಳು ಇರಲಿವೆ.
ಸ್ಪೇಸ್ ಆನ್ ವೀಲ್ಸ್: ವೈಜ್ಞಾನಿಕ ಅನ್ವೇಷಣೆಗಳೆಡೆಗೆ ಇಸ್ರೋದ ದೃಷ್ಟಿಯ ಪ್ರದರ್ಶನ. ಇದರಡಿ, ಸಂಚಾರಿ ವಸ್ತು ಪ್ರದರ್ಶನದ ಬಸ್‌ಗಳು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ತೆರಳಲಿವೆ. ಕಳೆದ ವರ್ಷದ ಜನವರಿ 24ರಂದು ಇಸ್ರೋ ವೈಜ್ಞಾನಿಕ ಜ್ಞಾನವನ್ನು ಪಸರಿಸುವ ಗುರಿ ಹೊಂದಿರುವ ವಿಜ್ಞಾನ ಭಾರತಿ ಸಂಸ್ಥೆಯೊಡನೆ ಒಪ್ಪಂದಕ್ಕೆ ಸಹಿ ಹಾಕಿದೆ. ಈಗ ಇಸ್ರೋ ಮತ್ತು ವಿಜ್ಞಾನ ಭಾರತಿ ಜಂಟಿಯಾಗಿ 'ಸ್ಪೇಸ್ ಆನ್ ವೀಲ್ಸ್' ಜಾರಿಗೆ ತರುತ್ತಿವೆ. ಇಸ್ರೋದ ಕಾರ್ಯಗಳು ಮತ್ತು ಭಾರತದ ಬಾಹ್ಯಾಕಾಶ ಯೋಜನೆಗಳ ಕುರಿತು ದೇಶಾದ್ಯಂತ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು ಇದರ ಉದ್ದೇಶ.
ಇಸ್ರೋ ಸ್ಪೇಸ್ ಟ್ಯೂಟರ್ಸ್: ಆಸಕ್ತಿದಾಯಕ, ಶೈಕ್ಷಣಿಕ ಯೋಜನೆಯಾದ ಸ್ಪೇಸ್ ಟ್ಯೂಟರ್ಸ್ ಯೋಜನೆಯಲ್ಲಿ ಇಸ್ರೋದಿಂದ ನೋಂದಾಯಿತರಾದ ಬಾಹ್ಯಾಕಾಶ ಬೋಧಕರು ಇರಲಿದ್ದಾರೆ. ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಚಾರ ನಡೆಸುವ ಗುರಿ ಹೊಂದಿದ್ದಾರೆ. ಔಟ್ ರೀಚ್ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದಾರೆ. ಇಸ್ರೋ ಬಾಹ್ಯಾಕಾಶ ವಲಯದ ಮಾಹಿತಿಗಳನ್ನು ಹಂಚಿಕೊಳ್ಳಲು ಹೆಚ್ಚಿನ ಉತ್ಸುಕತೆ ಹೊಂದಿದ್ದಾರೆ. ಹಲವಾರು ಸಂಸ್ಥೆಗಳು ಮತ್ತು ಶಾಲೆಗಳು ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನವನ್ನು ಅರ್ಥ ಮಾಡಿಕೊಳ್ಳಲು ನೆರವಾಗುವಂತಹ ಶೈಕ್ಷಣಿಕ ಮಾದರಿಗಳು, ಪುಸ್ತಕಗಳು ಮತ್ತು ಪ್ರಯೋಗಾಲಯ ಈ ಯೋಜನೆಯಲ್ಲಿ ಇರಲಿದೆ. ಆನ್‌ಲೈನ್ ಬೋಧಕರು ಮತ್ತು ಕಂಟೆಂಟ್ ಕ್ರಿಯೇಟರ್‌ಗಳು ಸಾಮಾಜಿಕ ಜಾಲತಾಣಗಳು ಮತ್ತು ಆ್ಯಪ್‌ಗಳನ್ನು ಬಳಸಿ ವರ್ಚುವಲ್ ಕಲಿಕಾ ಅನುಭವವನ್ನು ಒದಗಿಸಲಿದ್ದಾರೆ.
ಸ್ಪೇಸ್ ಟ್ಯೂಟರ್ಸ್‌ಗಳಿಂದ ಔಟ್ ರೀಚ್ ಕಾರ್ಯಕ್ರಮ: ಇಸ್ರೋದ 120 ಬಾಹ್ಯಾಕಾಶ ಬೋಧಕರು ಬೋಧನೆ, ರಸಪ್ರಶ್ನೆಗಳು ಮತ್ತು ವಸ್ತು ಪ್ರದರ್ಶನಗಳ ಮೂಲಕ ದೇಶಾದ್ಯಂತ ಬಾಹ್ಯಾಕಾಶ ಶಿಕ್ಷಣ ಮತ್ತು ಜಾಗೃತಿಯನ್ನು ಹೆಚ್ಚಿಸಲಿದ್ದಾರೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆಸಕ್ತಿ ಮತ್ತು ನವೀನ ಚಿಂತನೆಗಳನ್ನು ರೂಪಿಸುವ ಸಲುವಾಗಿ ಈ ಬೋಧಕರಿಗೆ ಬೋಧನಾ ವಸ್ತುಗಳನ್ನು ಒದಗಿಸಲಾಗಿದೆ.
ಭಾರತೀಯ ಅಂತರಿಕ್ಷ್ ಹ್ಯಾಕಥಾನ್: ಭಾರತೀಯ ಅಂತರಿಕ್ಷ ಹ್ಯಾಕಥಾನ್ - 2024 ಈ ವರ್ಷದ ಬಾಹ್ಯಾಕಾಶ ದಿನಾಚರಣೆಯ ಮುಖ್ಯ ಅಂಗವಾಗಿದೆ. ಇದು ಬಾಹ್ಯಾಕಾಶ ತಂತ್ರಜ್ಞಾನಗಳಿಗೆ ಹೊಸ ಆಲೋಚನೆಗಳು ಮತ್ತು ಪರಿಹಾರಗಳನ್ನು ಒದಗಿಸುವ ಗುರಿ ಹೊಂದಿದೆ. ಭಾರತ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಮುಂದೆ ಸಾಗುತ್ತಿದ್ದು, ಈ ಯೋಜನೆ ಭಾರತದ ಯುವ ತಲೆಮಾರುಗಳು ಬಾಹ್ಯಾಕಾಶ ವಲಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲಿದೆ. ರಾಷ್ಟ್ರೀಯ ಹ್ಯಾಕಥಾನ್, ಬಾಹ್ಯಾಕಾಶ ಸಂಬಂಧಿತ ಹಲವು ಸವಾಲುಗಳನ್ನು ವಿದ್ಯಾರ್ಥಿಗಳಿಗೆ ಒಡ್ಡಿ, ಅವರಿಂದ ವಿನೂತನ ಪರಿಹಾರಗಳನ್ನು ಪಡೆಯಲು ಪ್ರಯತ್ನಿಸಲಿದೆ.
ಇಸ್ರೋ ರೋಬೋಟಿಕ್ಸ್ ಚಾಲೆಂಜ್: ಇಸ್ರೋ ರೋಬೋಟಿಕ್ಸ್ ಚಾಲೆಂಜ್ ಕಳೆದ ವರ್ಷ ನವೆಂಬರ್ ನಲ್ಲಿ ಆರಂಭಗೊಂಡಿದ್ದು, ನೋಂದಣಿ ಮತ್ತು ಪ್ರಸ್ತಾವನೆ ಸಲ್ಲಿಕೆಗೆ ದೀರ್ಘ ಕಾಲಾವಧಿ ಒದಗಿಸಲಾಗಿತ್ತು. ತಂಡಗಳ ಆಯ್ಕೆ ನಡೆಸಿ, ಸ್ಪರ್ಧಾ ವಿವರಗಳನ್ನು ಹಂಚಿಕೊಂಡ ಬಳಿಕ, ಸ್ಪರ್ಧಿಗಳು ಹಾರ್ಡ್‌ವೇರ್ ಮತ್ತು ರೋವರ್ ಕಾರ್ಯಾಚರಣೆಗೆ ಸಂಬಂಧಿಸಿದ ವಿಡಿಯೋಗಳು ಮತ್ತು ವಿನ್ಯಾಸ ವರದಿಗಳನ್ನು ಒದಗಿಸಲಿದೆ. 'ಲೆಟ್ಸ್ ಬಿಲ್ಡ್ ಎ ಸ್ಪೇಸ್ ರೋಬೋಟ್' ಈ ಯೋಜನೆಯ ಘೋಷವಾಕ್ಯವಾಗಿದೆ. ವಿದ್ಯಾರ್ಥಿಗಳು ಬಾಹ್ಯಾಕಾಶ ಥೀಮ್ ಹೊಂದಿರುವ ಪ್ರದೇಶಕ್ಕೆ ರೋಬೋಟ್ ನಿರ್ಮಿಸುವ ಮೂಲಕ ಬಾಹ್ಯಾಕಾಶ ರೋಬೋಟಿಕ್ಸ್ ನಲ್ಲಿ ನಿರತರಾಗಬಹುದಾಗಿದೆ. ತಂಡಗಳು ಬಾಹ್ಯಾಕಾಶ ರೋಬೋಟಿಕ್ಸ್ ಕುರಿತು ನೈಜ ಸವಾಲುಗಳನ್ನು ಎದುರಿಸುವುದು ಯೋಜನೆಯ ಮುಖ್ಯ ಉದ್ದೇಶ.
ಇದನ್ನೂ ಓದಿ: ರಾಷ್ಟ್ರೀಯ ಬಾಹ್ಯಾಕಾಶ ದಿನ: ಸಾಧನೆಗಳ ಸ್ಮರಣೆ, ಭವಿಷ್ಯದ ಅನ್ವೇಷಣೆಗಳ ಮಹತ್ವ ತಿಳಿಸಲು ಮುಖ್ಯ- ಗಿರೀಶ್ ಲಿಂಗಣ್ಣ