ವಾಷಿಂಗ್ಟನ್, ಅಮೆರಿಕ: ದೇವ ಕಣ ಕಂಡು ಹಿಡಿದ ಬ್ರಿಟನ್ನ ಖ್ಯಾತ ಭೌತಶಾಸ್ತ್ರಜ್ಞ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಪೀಟರ್ ಹಿಗ್ಸ್ ವಿಧಿವಶರಾಗಿದ್ದಾರೆ. 94 ವರ್ಷದ ಹಿಗ್ಸ್ ಅವರ ನಿವಾಸದಲ್ಲಿ ವಯೋಸಹಜತೆ ಹಿನ್ನೆಲೆಯಲ್ಲಿ ಮರಣ ಹೊಂದಿದ್ದಾರೆ ಎಂದು ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್ ವಿಶ್ವವಿದ್ಯಾಲಯ ತಿಳಿಸಿದೆ. ಯುವ ವಿಜ್ಞಾನಿಗಳಿಗೆ ಉತ್ತಮ ಶಿಕ್ಷಕ ಹಾಗೂ ಮಾರ್ಗದರ್ಶಕ ಮತ್ತು ಸ್ಫೂರ್ತಿ ಚಿಲುಮೆ ಆಗಿದ್ದರು ಎಂದು ಸ್ಕಾಟಿಷ್ ವಿಶ್ವವಿದ್ಯಾನಿಲಯ ಪ್ರಶಂಸಿಸಿದೆ.
ಅವರು 'ದೈವಿಕ ಕಣ' ಅಥವಾ 'ಹಿಗ್ಸ್ಬೋಸನ್' ಸಿದ್ಧಾಂತದೊಂದಿಗೆ ತಮ್ಮ ವ್ಯಾಪಕ ಸಂಶೋಧನೆಗಳಿಗಾಗಿ ಪ್ರಪಂಚದಾದ್ಯಂತ ಪೀಟರ್ ಹಿಗ್ಸ್ ಸಾಕಷ್ಟು ಖ್ಯಾತಿ ಗಳಿಸಿದ್ದರು. ಎಲೆಕ್ಟ್ರಾನ್, ಕ್ವಾರ್ಕ್, ಕಣ ಮತ್ತು ಬ್ರಹ್ಮಾಂಡ ಹೇಗೆ ದ್ರವ್ಯರಾಶಿಯನ್ನು ಪಡೆಯಿತು ಎಂಬುದರ ಬಗ್ಗೆ ಅಧ್ಯಯನ ಮಾಡಿ, ತಮ್ಮ ಸಂಶೋಧನೆಯ ಮೂಲಕ ಜಗತ್ತಿಗೆ ತಿಳಿಸುವಲ್ಲಿ ಯಶಸ್ವಿಯಾಗಿದ್ದರು. ಭೌತಶಾಸ್ತ್ರದಲ್ಲಿ ಅನೇಕ ನಿಗೂಢಗಳನ್ನು ಅವರು ಭೇದಿಸಿದರು. ಅಷ್ಟೇ ಅಲ್ಲ 1964 ರಲ್ಲಿ ಅವರು ತಮ್ಮ ಸಿದ್ಧಾಂತಗಳ ಮೂಲಕ ಬೋಸಾನ್ ಕಣದ ಅಸ್ತಿತ್ವವನ್ನು ಘೋಷಿಸಿದರು.
2012 ರಲ್ಲಿ ಪರಮಾಣು ಸಂಶೋಧನೆಗಾಗಿ ಯುರೋಪಿಯನ್ ಆರ್ಗನೈಸೇಶನ್‌ನ ಲಾರ್ಜ್ ಹ್ಯಾಡ್ರಾನ್ ಕೊಲೈಡರ್‌ನಲ್ಲಿ ದೇವ ಕಣದ ಮೇಲೆ ಪ್ರಯೋಗಗಳನ್ನು ನಡೆಸಿದರು. ಆ ಫಲಿತಾಂಶಗಳ ಆಧಾರದ ಮೇಲೆ, ವಿಜ್ಞಾನಿಗಳು ಅರ್ಧ ಶತಮಾನದ ಹಿಂದೆ ಹಿಗ್ಸ್ ರೂಪಿಸಿದ ಸಿದ್ಧಾಂತವಾದ ಬೋಸಾನ್ ಕಣದ ಅಸ್ತಿತ್ವವನ್ನು ದೃಢಪಡಿಸಿದರು. ಅವರು ತಮ್ಮ ಈ ಸಿದ್ಧಾಂತ ಮಂಡಿಸಿದ್ದಕ್ಕಾಗಿ ಬೆಲ್ಜಿಯಂ ಭೌತಶಾಸ್ತ್ರಜ್ಞ ಫ್ರಾಂಕೋಯಿಸ್ ಅವರ ಜತೆಗೂಡಿ 2013 ರಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದರು.
ಹಿಗ್ಸ್ ಸುಮಾರು ಐದು ದಶಕಗಳ ಕಾಲ ಎಡಿನ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಮೂಲಕ ವಿಶ್ವವಿದ್ಯಾಲಯದೊಂದಿಗೆ ಸಾಕಷ್ಟು ಅವಿನಾಭಾವ ಸಂಬಂಧ ಹೊಂದಿದ್ದರು. ಪೀಟರ್ ವೇರ್ ಹಿಗ್ಸ್, ಪೀಟರ್ ಹಿಗ್ಸ್ ಅವರ ಪೂರ್ಣ ಹೆಸರಾಗಿದೆ. 29 ಮೇ 1929 ರಂದು ಇಂಗ್ಲೆಂಡ್‌ನ ನ್ಯೂಕ್ಯಾಸಲ್ ಅಪಾನ್ ಟೈನ್‌ನಲ್ಲಿ ಜನಿಸಿದರು. ತಂದೆ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ನಲ್ಲಿ (ಬಿಬಿಸಿ) ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಪೀಟರ್ ಹಿಗ್ಸ್ ಆರಂಭದಲ್ಲಿ ರಸಾಯನಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದರು. ಅದರಲ್ಲಿ ಅವರು ವಿಜ್ಞಾನಿಯಾಗಲು ಬಯಸಿದ್ದರು. ಆದರೆ, ಪ್ರಯೋಗಾಲಯದಲ್ಲಿ ತನ್ನನ್ನು ತಾನು ಅಸಹಾಯಕನನ್ನಾಗಿ ಕಂಡು, ಸೈದ್ಧಾಂತಿಕ ಭೌತಶಾಸ್ತ್ರದತ್ತ ತನ್ನ ಗಮನವನ್ನು ಬದಲಾಯಿಸಿದರು. ಹೀಗಾಗಿ, ಹಿಗ್ಸ್ ಈ ಕ್ಷೇತ್ರದಲ್ಲಿ ಬಹಳ ಶ್ರಮಿಸಿದರು ಮತ್ತು ಶ್ರೇಷ್ಠ ಭೌತಶಾಸ್ತ್ರಜ್ಞರಾಗಿ ಹೊರ ಹೊಮ್ಮಿದರು.
ಹಿಗ್ಸ್ ಲಂಡನ್‌ನ ಕಿಂಗ್ಸ್ ಕಾಲೇಜ್‌ನಿಂದ ಮೂರು ಪದವಿಗಳನ್ನು ಪಡೆದುಕೊಂಡಿದ್ದಾರೆ. 1954 ರಲ್ಲಿ ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಸಹ ಪಡೆದುಕೊಂಡಿದ್ದಾರೆ. ತಮ್ಮ ಉನ್ನತ ವ್ಯಾಸಂಗದ ಬಳಿಕ ಹಿಗ್ಸ್ ಅವರು ಎಡಿನ್‌ಬರ್ಗ್ ವಿಶ್ವವಿದ್ಯಾಲಯಕ್ಕೆ ಪ್ರವೇಶಿಸಿದ್ದರು. ಅಂದಿನಿಂದ ಐದು ದಶಕಗಳ ಕಾಲ ಇಲ್ಲಿ ತಮ್ಮ ವೃತ್ತಿ ಜೀವನವನ್ನು ಪೂರೈಸಿದರು. ಸುದೀರ್ಘ ಸೇವೆಯ ಬಳಿಕ ಅವರು 1996 ರಲ್ಲಿ ನಿವೃತ್ತಿ ಪಡೆದುಕೊಂಡಿದ್ದರು.
ಇದನ್ನು ಓದಿ: ಸೂರ್ಯಗ್ರಹಣದ ಅದ್ಭುತ ವಿಡಿಯೋ ಹಂಚಿಕೊಂಡ ನಾಸಾ, ಎಲೋನ್ ಮಸ್ಕ್ - Solar Eclipse video