ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮಂಗಳವಾರ 'ರಾಷ್ಟ್ರೀಯ ಪ್ರಸಾರ ನೀತಿ 2024'ನ್ನು ರೂಪಿಸುವ ಸಲುವಾಗಿ ಸಮಾಲೋಚನಾ ಪತ್ರವನ್ನು (National Broadcasting Policy 2024) ಬಿಡುಗಡೆ ಮಾಡಿದೆ. ಭಾರತವನ್ನು 'ಜಾಗತಿಕ ಕಂಟೆಂಟ್ ಹಬ್' ವನ್ನಾಗಿ ಮಾಡುವ ಉದ್ದೇಶದಿಂದ ಪ್ರಸಾರ ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವ ಸಂಬಂಧಿತ ಸಮಸ್ಯೆಗಳನ್ನು ಸಮಾಲೋಚನಾ ಪತ್ರಿಕೆಯಲ್ಲಿ ಪ್ರಸ್ತಾಪಿಸಲಾಗಿದೆ.
ಸಂಬಂಧಿತ ಪಕ್ಷಗಳಿಂದ ಅಭಿಪ್ರಾಯಗಳನ್ನು ಪಡೆಯಲು 'ರಾಷ್ಟ್ರೀಯ ಪ್ರಸಾರ ನೀತಿ -2024 ರ ಸೂತ್ರೀಕರಣಕ್ಕಾಗಿ ಒಳಹರಿವು' (Inputs for formulation of National Broadcasting Policy-2024) ಎಂಬ ಶೀರ್ಷಿಕೆಯ ಸಮಾಲೋಚನಾ ಪತ್ರವನ್ನು ಸಿದ್ಧಪಡಿಸಲಾಗಿದೆ ಎಂದು ಸಂವಹನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
"ಸಮಾಲೋಚನಾ ಪತ್ರದಲ್ಲಿ ಪ್ರಸ್ತಾಪಿಸಲಾದ ವಿಷಯಗಳ ಬಗ್ಗೆ ಲಿಖಿತ ಪ್ರತಿಕ್ರಿಯೆಗಳನ್ನು ಏಪ್ರಿಲ್ 30, 2024 ರೊಳಗೆ ಸಂಬಂಧಿತ ಪಕ್ಷಗಳಿಂದ ಆಹ್ವಾನಿಸಲಾಗಿದೆ. ಈ ಕರಡು ಪತ್ರವನ್ನು ಪ್ರಸಾರ ನೀತಿಯ ರಚನೆಗಾಗಿ ತಯಾರಿಸಿರುವುದರಿಂದ ಈ ಸಮಾಲೋಚನಾ ಪತ್ರದಲ್ಲಿ ಯಾವುದೇ ಪ್ರತಿ-ಪ್ರತಿಕ್ರಿಯೆಗಳನ್ನು (counter-comments) ಆಹ್ವಾನಿಸಲಾಗಿಲ್ಲ ಎಂಬುದನ್ನು ಗಮನಿಸಬೇಕು." ಎಂದು ಟ್ರಾಯ್ ಹೇಳಿದೆ.
ರಾಷ್ಟ್ರೀಯ ಪ್ರಸಾರ ನೀತಿಯನ್ನು ರೂಪಿಸಲು ಟ್ರಾಯ್ ಕಾಯ್ದೆ, 1997 ರ ಸೆಕ್ಷನ್ 11 ರ ಅಡಿಯಲ್ಲಿ ಪರಿಗಣಿತ ಸಲಹೆಗಳನ್ನು ಒದಗಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಳೆದ ವರ್ಷ ಜುಲೈನಲ್ಲಿ ಟ್ರಾಯ್ ಅನ್ನು ಕೋರಿತ್ತು. ಇದರ ಮೊದಲ ಹೆಜ್ಜೆಯಾಗಿ, ರಾಷ್ಟ್ರೀಯ ಪ್ರಸಾರ ನೀತಿಯನ್ನು ರೂಪಿಸಲು ಪರಿಗಣಿಸಬೇಕಾದ ಸಮಸ್ಯೆಗಳನ್ನು ಗುರುತಿಸಲು ಟ್ರಾಯ್ ಸೆಪ್ಟೆಂಬರ್ 21, 2023 ರಂದು ಪೂರ್ವ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿತು.
ಕಾಲ್ ಫಾರ್ವರ್ಡಿಂಗ್ ಸೌಲಭ್ಯ ರದ್ದು: ಏಪ್ರಿಲ್ 15 ರಿಂದ ಜಾರಿಗೆ ಬರುವಂತೆ ಯುಎಸ್ಎಸ್ಡಿ ಆಧರಿತ ಕರೆ ಫಾರ್ವರ್ಡಿಂಗ್ ಸೇವೆಯನ್ನು ನಿಷ್ಕ್ರಿಯಗೊಳಿಸಲು ಮತ್ತು ಅದನ್ನು ಮತ್ತೆ ಸಕ್ರಿಯಗೊಳಿಸಲು ಪರ್ಯಾಯ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಟೆಲಿಕಾಂ ಇಲಾಖೆ ಟೆಲಿಕಾಂ ಆಪರೇಟರ್ಗಳಿಗೆ ಸೂಚಿಸಿದೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ. ಮೊಬೈಲ್ ಫೋನ್ಗಳ ಮೂಲಕ ನಡೆಯುವ ವಂಚನೆಗಳು ಮತ್ತು ಆನ್ ಲೈನ್ ಅಪರಾಧಗಳನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ.
ಮಾರ್ಚ್ 28 ರ ಆದೇಶದಲ್ಲಿ, ಕರೆ ಫಾರ್ವರ್ಡಿಂಗ್ ಸೇವೆಗಳಿಗಾಗಿ ಸಾಮಾನ್ಯವಾಗಿ *401# ಸೇವೆಗಳು ಎಂದು ಕರೆಯಲ್ಪಡುವ ಯುಎಸ್ಎಸ್ಡಿ (ಅನ್ ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವೀಸ್ ಡೇಟಾ) ಆಧರಿತ ಕಾಲ್ ಫಾರ್ವರ್ಡಿಂಗ್ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ದೂರಸಂಪರ್ಕ ಇಲಾಖೆ ಹೇಳಿದೆ.
ಇದನ್ನೂ ಓದಿ : ಹೆಡ್-ಟ್ರ್ಯಾಕಿಂಗ್ 3D ಆಡಿಯೊ 'ನಿರ್ವಾಣ ಯುಟೋಪಿಯಾ' ಹೆಡ್ಫೋನ್ ಬಿಡುಗಡೆ ಮಾಡಿದ ಬೋಟ್ - boAt headphones