ನವದೆಹಲಿ: 2023 ರ ಡಿಸೆಂಬರ್ನಲ್ಲಿ ಭಾರತದಲ್ಲಿ ಫೇಸ್ಬುಕ್ನ 13 ನೀತಿ ನಿಯಮಗಳ ಅಡಿಯಲ್ಲಿ 19.8 ಮಿಲಿಯನ್ ಕಂಟೆಂಟ್ಗಳನ್ನು ಮತ್ತು ಇನ್ಸ್ಟಾಗ್ರಾಮ್ನ 12 ನೀತಿ ನಿಯಮಗಳ ಅಡಿ 6.2 ಮಿಲಿಯನ್ ಕಂಟೆಂಟ್ಗಳನ್ನು ತೆಗೆದುಹಾಕಲಾಗಿದೆ ಎಂದು ಮೆಟಾ ಹೇಳಿದೆ. ಡಿಸೆಂಬರ್ 1 ರಿಂದ 31 ರ ನಡುವೆ, ಭಾರತೀಯ ಕುಂದುಕೊರತೆ ನಿವಾರಣಾ ವ್ಯವಸ್ಥೆಯ ಮೂಲಕ ಫೇಸ್ಬುಕ್ಗೆ 44,332 ದೂರು ಬಂದಿವೆ ಮತ್ತು 33,072 ಪ್ರಕರಣಗಳಲ್ಲಿ ಬಳಕೆದಾರರ ಸಮಸ್ಯೆಗಳನ್ನು ಪರಿಹರಿಸಲು ಸಾಧನಗಳನ್ನು ಒದಗಿಸಿದೆ ಎಂದು ಮೆಟಾ ಹೇಳಿದೆ.
ನಿರ್ದಿಷ್ಟ ನಿಯಮಗಳ ಉಲ್ಲಂಘನೆಗಳಿಗಾಗಿ ಕಂಟೆಂಟ್ ಅನ್ನು ವರದಿ ಮಾಡಲು ಪೂರ್ವ- ಸ್ಥಾಪಿತ ಚಾನೆಲ್ಗಳು, ಗ್ರಾಹಕರು ತಮ್ಮ ಡೇಟಾವನ್ನು ಡೌನ್ಲೋಡ್ ಮಾಡಬಹುದಾದ ಸ್ವಯಂ - ಪರಿಹಾರ ವ್ಯವಸ್ಥೆಗಳು, ಖಾತೆ ಹ್ಯಾಕ್ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳು ಇತ್ಯಾದಿಗಳನ್ನು ಇವು ಒಳಗೊಂಡಿವೆ ಎಂದು ಐಟಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳು, 2021 ಕ್ಕೆ ಅನುಸಾರವಾಗಿ ಮೆಟಾ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ.
"ವಿಶೇಷ ವಿಮರ್ಶೆಯ ಅಗತ್ಯವಿರುವ ಇತರ 11,260 ದೂರುಗಳಲ್ಲಿ ನಾವು ನಮ್ಮ ನೀತಿಗಳ ಪ್ರಕಾರ ಕಂಟೆಂಟ್ ಪರಿಶೀಲಿಸಿದ್ದೇವೆ ಮತ್ತು ಒಟ್ಟು 6,578 ದೂರುಗಳ ಮೇಲೆ ಕ್ರಮ ಕೈಗೊಂಡಿದ್ದೇವೆ. ಉಳಿದ 4,682 ದೂರುಗಳನ್ನು ಪರಿಶೀಲಿಸಲಾಗಿದೆ. ಆದರೆ, ಅವುಗಳ ವಿಷಯದಲ್ಲಿ ಕ್ರಮ ಕೈಗೊಂಡಿಲ್ಲ" ಎಂದು ಮೆಟಾ ತಿಳಿಸಿದೆ.
ಇನ್ಸ್ಟಾಗ್ರಾಮ್ನಲ್ಲಿ ಕಂಪನಿಯು ಭಾರತೀಯ ಕುಂದುಕೊರತೆ ನಿವಾರಣಾ ವ್ಯವಸ್ಥೆಯಡಿ 19,750 ದೂರುಗಳನ್ನು ಸ್ವೀಕರಿಸಿದೆ. ಈ ಪೈಕಿ 9,555 ಪ್ರಕರಣಗಳಲ್ಲಿ ಬಳಕೆದಾರರ ಸಮಸ್ಯೆಗಳನ್ನು ಪರಿಹರಿಸಲು ಸಾಧನಗಳನ್ನು ಒದಗಿಸಿದ್ದೇವೆ ಎಂದು ಮೆಟಾ ಹೇಳಿದೆ. ವಿಶೇಷ ವಿಮರ್ಶೆಯ ಅಗತ್ಯವಿರುವ ಇತರ 10,195 ದೂರುಗಳ ವಿಷಯದಲ್ಲಿ ಮೆಟಾ ಕಂಟೆಂಟ್ಗಳನ್ನು ಪರಿಶೀಲಿಸಿದೆ ಮತ್ತು ಒಟ್ಟು 6,028 ದೂರುಗಳ ಮೇಲೆ ಕ್ರಮ ಕೈಗೊಂಡಿದೆ. ಉಳಿದ 4,167 ದೂರುಗಳನ್ನು ಪರಿಶೀಲಿಸಲಾಗಿದೆ. ಆದರೆ ಕ್ರಮ ಕೈಗೊಂಡಿಲ್ಲ.
ಹೊಸ ಐಟಿ ನಿಯಮಗಳು 2021 ರ ಅಡಿಯಲ್ಲಿ, 5 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ದೊಡ್ಡ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಮಾಸಿಕ ಅನುಸರಣೆ ವರದಿ ಪ್ರಕಟಿಸುವುದು ಕಡ್ಡಾಯವಾಗಿದೆ. ನವೆಂಬರ್ ತಿಂಗಳಲ್ಲಿ ಮೆಟಾ ಫೇಸ್ಬುಕ್ನಲ್ಲಿನ 18.3 ಮಿಲಿಯನ್ ಕಂಟೆಂಟ್ಗಳನ್ನು ಮತ್ತು ಇನ್ಸ್ಟಾಗ್ರಾಮ್ನಲ್ಲಿನ 4.7 ಮಿಲಿಯನ್ ಕಂಟೆಂಟ್ಗಳನ್ನು ತೆಗೆದುಹಾಕಿತ್ತು.
ಇದನ್ನೂ ಓದಿ : ಆನ್ಲೈನ್ನಲ್ಲಿ ಮಕ್ಕಳಿಗೆ ಕಿರುಕುಳ; ಪೋಷಕರ ಕ್ಷಮೆಯಾಚಿಸಿದ ಮಾರ್ಕ್ ಜುಕರ್ಬರ್ಗ್