ಶ್ರೀಹರಿಕೋಟ: ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಹವಾಮಾನ ಮುನ್ಸೂಚನಾ ಉಪಗ್ರಹ ಇನ್ಸಾಟ್ - 3ಡಿಎಸ್ ನಭಕ್ಕೆ ಜಿಗಿಯಲು ಕ್ಷಣಗಣನೆ ಶುರುವಾಗಿದೆ. ಜಿಎಸ್ಎಲ್ವಿ ರಾಕೆಟ್ ಈ ಇನ್ಸಾಟ್ 3ಡಿಯನ್ನು ಉಪಗ್ರಹವನ್ನು ಹೊತ್ತೊಯ್ಯಲಿದೆ.
ಹವಾಮಾನ ಮುನ್ಸೂಚನೆ, ಭೂಮಿ ಮತ್ತು ಸಾಗರದ ಮೇಲ್ಮೈ ಮೇಲ್ವಿಚಾರಣೆ ಮತ್ತು ವಿಪತ್ತು ಎಚ್ಚರಿಕೆಯ ಜೊತೆಗೆ ಸಂಶೋಧನೆ ಮತ್ತು ರಕ್ಷಣಾ ಸೇವೆಯನ್ನು ಈ ಇನ್ಸಾಟ್ 3ಡಿ ಮತ್ತು ಇನ್ಸಾಟ್ 3ಡಿಆರ್ ನಿರಂತರವಾಗಿ ನೀಡಲಿದೆ. ಇಲ್ಲಿನ ಸತೀಶ್ ಧವನ್ ಉಪಗ್ರಹ ಕೇಂದ್ರದಿಂದ ನಿಗದಿತ ಸಮಯ ಸಂಜೆ 5.35ಕ್ಕೆ ಈ ರಾಕೆಟ್ ಉಡಾವಣೆ ಆಗಲಿದೆ. ಮೂರು ಹಂತದ ಈ ರಾಕೆಟ್ನಲ್ಲಿ ಮೇಲ್ಬಾಗದ ಹಂತದಲ್ಲಿ ಕ್ರಯೋಜೆನಿಕ್ ಇದ್ದು, ಉಪಗ್ರಹ ಉಡಾವಣೆಗೊಂಡ 20 ನಿಮಿಷದಲ್ಲಿ ಇದು ಪ್ರತ್ಯೇಕವಾಗುವ ನಿರೀಕ್ಷೆ ಇದೆ. ಇನ್ನು ಇನ್ಸಾಟ್ ಉಪಗ್ರಹವೂ 2,274 ಕೆಜಿ ತೂಕವಿದ್ದು, ಜಿಯೋಸಿಂಕ್ರೊನಸ್ ಟ್ರಾನ್ಸ್‌ಫರ್ ಕಕ್ಷೆಗೆ ಇದನ್ನು ಇರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ವಿಜ್ಞಾನಿಗಳು ಈ ಉಪಗ್ರಹವನ್ನು ಭೂ ಸ್ಥಾಯಿ ಕಕ್ಷೆಯಲ್ಲಿ ಇರಿಸಲು ಕಾರ್ಯ ನಿರ್ವಹಿಸುವರು.
51.7 ಮೀಟರ್ ಉದ್ದದ ರಾಕೆಟ್ ಮೋಡದ ಗುಣಲಕ್ಷಣಗಳು, ಮಂಜು, ಮಳೆ, ಹಿಮದ ಹೊದಿಕೆ, ಹಿಮದ ಆಳ, ಬೆಂಕಿ, ಹೊಗೆ, ಭೂಮಿ ಮತ್ತು ಸಾಗರವನ್ನು ಅಧ್ಯಯನ ಮಾಡಲು ಬೇಕಾದ ಇಮೇಜರ್ ಪೇಲೋಡ್‌ಗಳು, ಸೌಂಡರ್ ಪೇಲೋಡ್‌ಗಳು, ಡೇಟಾ ರಿಲೇ ಟ್ರಾನ್ಸ್‌ಪಾಂಡರ್‌ಗಳು, ಉಪಗ್ರಹ ನೆರವಿನ ಹುಡುಕಾಟದ ಟ್ರಾನ್ಸ್‌ಪಾಂಡರ್‌ಗಳನ್ನು ಕೊಂಡೊಯ್ಯಲಿದೆ.
ಭೂ ವಿಜ್ಞಾನ ಸಚಿವಾಲಯದ ವಿವಿಧ ಇಲಾಖೆಗಳಾದ ಭಾರತ ಹವಾಮಾನ ಇಲಾಖೆ, ಮಧ್ಯಮ ಶ್ರೇಣಿಯ ಹವಾಮಾನ ಮುನ್ಸೂಚನೆಯ ರಾಷ್ಟ್ರೀಯ ಕೇಂದ್ರ, ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ, ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ, ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ ಮತ್ತು ವಿವಿಧ ಏಜೆನ್ಸಿಗಳು ಮತ್ತು ಸಂಸ್ಥೆಗಳು ಈ ಉಪಗ್ರಹ ಕಳುಹಿಸುವ ಡೇಟಾದಿಂದ ಪ್ರಯೋಜನ ಪಡೆಯಲಿದೆ. ಇನ್ಸಾಟ್ 3ಡಿಎಸ್ ಕಳುಹಿಸಿದ ದತ್ತಾಂಶದ ಆಧಾರದ ಮೇಲೆ ಸುಧಾರಿತ ಹವಾಮಾನ ಮುನ್ಸೂಚನೆಗಳು ಮತ್ತು ಹವಾಮಾನ ಸೇವೆಗಳನ್ನು ಇವು ನೀಡಲಿದೆ.
ಈ ಇನ್ಸಾಟ್ 3ಡಿಎಸ್ ಯೋಜನೆಯ ಜೀವಿತಾವಧಿ 19 ವರ್ಷಗಳು ಎಂದು ನೀರಿಕ್ಷಿಸಲಾಗಿದೆ. ಈ ವರ್ಷ ಇಸ್ರೋ ನಡೆಸುತ್ತಿರುವ ಎರಡನೇ ಉಪಗ್ರಹ ಉಡಾವಣಾ ಯೋಜನೆ ಇದಾಗಿದೆ. ಮೊದಲ ಯೋಜನೆಯನ್ನು ವರ್ಷದ ಮೊದಲ ದಿನವೇ ಅಂದರೆ ಜನವರಿ 1ರಂದು ಪಿಎಸ್ಎಲ್ವಿ-ಸಿಎಸ್58/ಎಕ್ಸ್ಪೊಸಟ್ ಯಶಸ್ವಿಯಾಗಿ ಉಡಾವಣೆಗೊಂಡಿತು.
ಇದನ್ನೂ ಓದಿ: ಚಂದ್ರ ಶಿಲೆಗಳ ವಿಶ್ಲೇಷಣಾ ಮಾಹಿತಿ ರವಾನಿಸಿದ ಜಪಾನ್ ನೌಕೆ: ಚಂದ್ರನ ಉಗಮ ಪತ್ತೆಗೆ ಸಹಕಾರಿ