Inactivity Reboot Feature: ಐಫೋನ್‌ಗಳು ಸ್ಟ್ಯಾಂಡರ್ಡ್ ಮತ್ತು ಸೆಕ್ಯೂರಿಟಿ ವಿಷಯದಲ್ಲಿ ಬಹಳ ಸ್ಟ್ರಾಂಗು. ಸೆಕ್ಯೂರಿಟಿ ವಿಷಯದಲ್ಲಿ ಈ ಒಂದು ಫೀಚರ್ ಐಫೋನ್ ಬಳಕೆದಾರರಿಗೆ ಬಹಳ ಉಪಯೋಗವಾಗಿದೆ. ಐಫೋನ್ ಪಾಸ್‌ವರ್ಡ್ ಅನ್ನು ಹ್ಯಾಕ್ ಮಾಡಲು ಬರೀ ಕಳ್ಳರಿಗಲ್ಲ, ಪೊಲೀಸ್ ಇಲಾಖೆಗೂ ಅಸಾಧ್ಯವಾಗುತ್ತಿದೆ.
ಆ್ಯಪಲ್ ಸದ್ದಿಲ್ಲದೆ ಐಫೋನ್‌ಗಳಿಗೆ ‘ಇನ್ಆಕ್ಟಿವಿಟಿ ರೀಬೂಟ್’ ಎಂಬ ಹೊಸ ಫೀಚರ್ ತಂದಿದೆ. ಇದರಿಂದ ಕಳ್ಳರು ಮತ್ತು ಕಾನೂನು ಜಾರಿ ಅಧಿಕಾರಿಗಳಿಗೆ ಸ್ಮಾರ್ಟ್‌ಫೋನ್ ಪಾಸ್‌ವರ್ಡ್ ತೆರೆಯಲು ಕಷ್ಟವಾಗುತ್ತದೆ. ಇಂತಿಷ್ಟು ದಿನಗಳವರೆಗೆ ಅನ್‌ಲಾಕ್ ಆಗಿರುವ iOS 18.1 ಪ್ರೊಸೆಸರ್ ಐಫೋನ್‌ಗಳು ತಾವಾಗಿಯೇ ರೀಬೂಟ್ ಆಗುತ್ತವೆ. 404 ಮಾಧ್ಯಮ ವರದಿಯ ಪ್ರಕಾರ, ಅದು ಮತ್ತೊಮ್ಮೆ ಪವರ್‌ಅಪ್ ಆದ ನಂತರ, ಡಿಜಿಟಲ್ ಫೊರೆನ್ಸಿಕ್ ಟೂಲ್ಗಳನ್ನು ಬಳಸಿಕೊಂಡು ಸಾಧನವನ್ನು ಅನ್‌ಲಾಕ್ ಮಾಡಲು ಕಷ್ಟವಾಗುತ್ತದೆ ಎನ್ನುತ್ತಾರೆ ಬಹು ಭದ್ರತಾ ತಜ್ಞರು.
ಕಳೆದ ವಾರ, ಅಮೆರಿಕ ಕಾನೂನು ಜಾರಿ ಅಧಿಕಾರಿಗಳು ನ್ಯಾಯಾಂಗ ಪರೀಕ್ಷೆಗಾಗಿ ತಮ್ಮ ಕಸ್ಟಡಿಯಲ್ಲಿ ಇರಿಸಲಾದ ಐಫೋನ್‌ಗಳು ಮಿಸ್ಟರಿಯಾಗಿ ರೀಬೂಟ್ ಆಗುತ್ತಿರುವುದನ್ನು ಗಮನಿಸಿದ್ದಾರೆ ಎಂದು ವರದಿಯಾಗಿದೆ. ಕ್ರಿಸ್ಟೋಫರ್ ವ್ಯಾನ್ಸ್ ಎಂಬ ಫೋರೆನ್ಸಿಕ್ ಸ್ಪೆಷಲಿಸ್ಟ್ ಕಾನೂನು ಜಾರಿ ಮತ್ತು ಫೋರೆನ್ಸಿಕ್ ಎಕ್ಸ್‌ಪರ್ಟ್ ಗ್ರೂಪ್ ಚಾಟ್‌ನಲ್ಲಿ ಹಂಚಿಕೊಂಡ ಸಂದೇಶಗಳ ಪ್ರಕಾರ, ನಾವು ಐಒಎಸ್ 18 ಮತ್ತು ಅದಕ್ಕಿಂತ ಹೆಚ್ಚಿನ ವರ್ಸನ್ ಪ್ರೊಸೆಸರ್ನಲ್ಲಿ ಇನ್ ಆ್ಯಕ್ಟಿವಿಟಿ ಟೈಮರ್ ಅನ್ನು ಗುರುತಿಸಿದ್ದೇವೆ ಎಂದು ಹೇಳಿದ್ದಾರೆ. ಈ ಟೈಮರ್ AFU ಸ್ಥಿತಿಯಲ್ಲಿ ಸಾಧನಗಳನ್ನು BFU ಸ್ಥಿತಿಗೆ ರೀಬೂಟ್ ಮಾಡಲು ಕಾರಣವಾಗುತ್ತದೆ. ಇದನ್ನು ನಾವು ಗುರುತಿಸಿದ್ದೇವೆ. ಮ್ಯಾಗ್ನೆಟ್ ಫೋರೆನ್ಸಿಕ್ಸ್ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುವ ವ್ಯಾನ್ಸ್ ಅವರು ಕಾನೂನು ಜಾರಿ ಸಂಸ್ಥೆಗಳಿಗೆ ತನಿಖಾ ಸಾಧನಗಳನ್ನು ಮಾರಾಟ ಮಾಡುತ್ತಾರೆ ಎಂದು ವರದಿಯಾಗಿದೆ.
AFU ಎಂದರೆ ಮೊದಲ ಅನ್‌ಲಾಕ್ ನಂತರ, ಅಂದರೆ ಫೋನ್ ರೀಬೂಟ್ ಮಾಡಿದ ನಂತರ ಒಮ್ಮೆಯಾದರೂ ಅನ್‌ಲಾಕ್ ಮಾಡಲಾಗುತ್ತದೆ. ಮೊದಲ ಅನ್‌ಲಾಕ್‌ಗೂ ಮುನ್ನ (BFU) ಫೋನ್ ಆನ್ ಮಾಡಿದ ನಂತರ ಒಮ್ಮೆಯೂ ಅನ್‌ಲಾಕ್ ಮಾಡಲು ಆಗುವುದಿಲ್ಲ ಮತ್ತು ಈ ಹಂತದಲ್ಲಿ ಸಾಧನಕ್ಕೆ ಪ್ರವೇಶ ಪಡೆಯುವುದು ಕಷ್ಟ ಎಂದು ವರದಿಯಾಗಿದೆ. ಐಫೋನ್‌ಗಳಲ್ಲಿನ ಇನ್ಆಕ್ಟಿವಿಟಿ ರೀಬೂಟ್ ಫೀಚರ್ನಿಂದಾಗಿ ತನಿಖೆಗಳಿಗೆ ಸಹಾಯವಾಗಲು ವಶಪಡಿಸಿಕೊಂಡ ಐಫೋನ್ ಸಾಧನಗಳಿಂದ ಡೇಟಾ ಹೊರತೆಗೆಯಲು ಕಾನೂನು ಜಾರಿ ಅಧಿಕಾರಿಗಳು ಮತ್ತು ಆ್ಯಪಲ್‌ನಂತಹ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳ ತಯಾರಕರ ನಡುವಿನ ತಿಕ್ಕಾಟ ದೀರ್ಘಕಾಲದಿಂದಲೂ ನಡೆಯುತ್ತಲೇ ಇದೆ.
ಈ ವರ್ಷಾರಂಭದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಐಫೋನ್ ಅನ್ನು ಅನ್ಲಾಕ್ ಮಾಡಲು ಭಾರತದ ಜಾರಿ ನಿರ್ದೇಶನಾಲಯ (ಇಡಿ) ಮಾಡಿದ ವಿನಂತಿಯನ್ನು ಅನುಸರಿಸಲು ಆ್ಯಪಲ್ ನಿರಾಕರಿಸಿದೆ ಎಂದು ವರದಿಯಾಗಿತ್ತು. ಯಾವುದೇ ಡೇಟಾ ಹಿಂಪಡೆಯಲು ಪಾಸ್‌ವರ್ಡ್ ಅಗತ್ಯವಿದೆ ಎಂದು ಆ್ಯಪಲ್ ಇಡಿಗೆ ತಿಳಿಸಿದ್ದು, ಅದನ್ನು ಹಂಚಿಕೊಳ್ಳಲು ಕೇಜ್ರಿವಾಲ್ ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಇದನ್ನೂ ಓದಿ: ಐಫೋನ್ 16 ಸೀರಿಸ್ನ ಬಿಡಿಭಾಗಗಳ ಬೆಲೆ ವಿವರ ಬಿಡುಗಡೆಗೊಳಿಸಿದ ಆಪಲ್