ಚೆನ್ನೈ( ತಮಿಳುನಾಡು): ಬಾಹ್ಯಾಕಾಶ ಕ್ಷೇತ್ರ ಇದೀಗ ಸಂಶೋಧನೆಗೆ ಮಾತ್ರ ಸಿಮೀತವಾಗಿಲ್ಲ. ಇದೀಗ ಅದು ಉದ್ಯಮವಾಗಿ ಬೆಳವಣಿಗೆ ಕಾಣುತ್ತಿದೆ. ಬಾಹ್ಯಾಕಾಶ ಪರಿಶೋಧನೆಯು ಈ ಶತಮಾನದ ಆರಂಭದಲ್ಲಿ ಅಷ್ಟೊಂದು ಪ್ರಸಿದ್ಧಿಯನ್ನೇನು ಪಡೆದುಕೊಂಡಿರಲಿಲ್ಲ. ನಕ್ಷತ್ರಗಳು, ಉಪಗ್ರಹಗಳು ಮತ್ತು ಗ್ರಹಗಳು ISRO ಮತ್ತು NASA ಗಳಿಗೆ ಮಾತ್ರ ನಿರ್ದಿಷ್ಟವಾದ ವೈಜ್ಞಾನಿಕ ವಿಷಯಗಳಾಗಿದ್ದವು. ಆದರೆ ಇಂದು ಅವುಗಳ ಬಗ್ಗೆ ಜನಸಾಮಾನ್ಯನೂ ಗಮನಕೊಡುತ್ತಿದ್ದಾನೆ. ಆ ವಿದ್ಯಮಾನಗಳ ಮೇಲೆ ಆಸಕ್ತಿ ಹೊಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಾಹ್ಯಾಕಾಶ ವಿಜ್ಞಾನದಲ್ಲಿ ಕೇವಲ ಸಂಶೋಧನಾ ಸಂಸ್ಥೆಗಳು ಮತ್ತು ಸರ್ಕಾರಗಳು ಮಾತ್ರವೇ ಸಂಶೋಧನೆ ಮಾಡುತ್ತಿಲ್ಲ. ಅಲ್ಲೀಗ ಖಾಸಗಿ ಸಂಸ್ಥೆಗಳು ಪ್ರವೇಶ ಪಡೆದಿವೆ. ಬಾಹ್ಯಾಕಾಶ ಸಂಶೋಧನೆ ಮತ್ತು ಅನುಸಂಧಾನದಲ್ಲಿ ಅಮೂಲಾಗ್ರ ಬದಲಾವಣೆ ಕಾಣುತ್ತಿದೆ. ಭಾರತದಲ್ಲಿ ಅಂತಹ ಒಂದು ಇತ್ತೀಚಿನ ಬೆಳವಣಿಗೆಯೆಂದರೆ ಬಾಹ್ಯಾಕಾಶ ಸಂಶೋಧನೆಯ ಕೆಲವು ವಲಯಗಳಲ್ಲಿ ಸರ್ಕಾರ ಶೇ 100ರಷ್ಟು ವಿದೇಶಿ ನೇರ ಹೂಡಿಕೆ - ಎಫ್‌ಡಿಐಗೆ ಅವಕಾಶ ಮಾಡಿಕೊಟ್ಟಿದೆ. ಇದು ಹಲವು ಅವಕಾಶಗಳ ಬಾಗಿಲನ್ನೇ ತರೆದಿಟ್ಟಿದೆ. ಬಾಹ್ಯಾಕಾಶದಲ್ಲಿ ಭಾರತೀಯ ಕಂಪನಿಗಳಲ್ಲಿ ಹೂಡಿಕೆ ಮಾಡಲು ವಿದೇಶಿ ಹೂಡಿಕೆದಾರರು ಮುಂದೆ ಬರುವ ಸಾಧ್ಯತೆಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಇಸ್ರೋದ ಮಾಜಿ ನಿರ್ದೇಶಕ ಮತ್ತು ಮೂನ್ ಮ್ಯಾನ್ ಆಫ್ ಇಂಡಿಯಾ ಎಂದೇ ಪ್ರಸಿದ್ಧಿ ಪಡೆದಿರುವ ಡಾ. ಮೈಲ್‌ಸ್ವಾಮಿ ಅಣ್ಣಾದೊರೈ ಅವರ ಜತೆ ETV ಭಾರತದ ಶಂಕರನಾರಾಯಣನ್ ಸುದಲೈ ಅವರು ಸಂದರ್ಶನ ನಡೆಸಿದ್ದಾರೆ. ಬಾಹ್ಯಾಕಾಶ ಕ್ಷೇತ್ರ ಹಾಗೂ ಅದರ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ ಹಾಗೂ ಈ ಕ್ಷೇತ್ರದಲ್ಲಿ ಯುವಕರಿಗೆ ಹೇಗೆಲ್ಲ ಉಪಯೋಗ ಆಗುತ್ತದೆ. ಅವರ ವೃತ್ತಿಜೀವನಕ್ಕೆ ಹೇಗೆಲ್ಲ ನೆರವಾಗುತ್ತದೆ ಎಂಬ ಬಗ್ಗೆ ತಮ್ಮದೇ ಆದ ದೃಷ್ಟಿಕೋನವನ್ನು ಮತ್ತು ಅವಕಾಶಗಳ ಬಾಗಿಲು ಹೇಗೆಲ್ಲ ತೆರೆಯುತ್ತದೆ ಎಂಬುದರ ಬಗ್ಗೆ ಅಣ್ಣಾದೊರೈ ವಿವರಿಸಿದ್ದಾರೆ.
ಸಂದರ್ಶನದ ಆಯ್ದ ಭಾಗಗಳು:
ಈಟಿವಿ ಭಾರತ: ಕೇಂದ್ರ ಸರ್ಕಾರವು ಬಾಹ್ಯಾಕಾಶ ಸಂಶೋಧನೆಯ ಕೆಲವು ವಲಯಗಳಲ್ಲಿ ಶೇ 100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ನೀಡಿದೆ. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಯಾವೆಲ್ಲ ಧನಾತ್ಮಕ ಬದಲಾವಣೆಗಳನ್ನು ತರುತ್ತದೆ ಎಂದು ನೀವು ಭಾವಿಸುತ್ತೀರಾ?
ಡಾ. ಅಣ್ಣಾದೊರೈ: ಇತ್ತೀಚಿನ ಉದಾಹರಣೆಯನ್ನೇ ನಾವು ಗಮನಕ್ಕೆ ತೆಗದುಕೊಳ್ಳುವುದಾದರೆ, ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತದ ಏರೋಸ್ಪೇಸ್ ಅಂದರೆ ಬಾಹ್ಯಾಕಾಶ ಕ್ಷೇತ್ರವು ಭಾರಿ ಪ್ರಗತಿಯನ್ನ ಕಂಡಿದೆ. ಕಳೆದ 65 ವರ್ಷಗಳಲ್ಲಿ ಉಡಾವಣೆಯಾದ ಉಪಗ್ರಹಗಳ ಪೈಕಿ ಶೇಕಡಾ 40 ಕ್ಕಿಂತ ಹೆಚ್ಚು ಉಪಗ್ರಹಗಳನ್ನು ಸಾಂಕ್ರಾಮಿಕದ ಬಳಿಕ ಅಂದರೆ ಕಳೆದ ಮೂರು ವರ್ಷಗಳಲ್ಲಿ ಉಡ್ಡಯನ ಮಾಡಲಾಗಿದೆ. ಮುಖ್ಯವಾಗಿ ಶೇ 90ರಷ್ಟು ಉಪಗ್ರಹಗಳನ್ನು ಎಲೋನ್ ಮಸ್ಕ್‌ರ ಸ್ಪೇಸ್‌ಎಕ್ಸ್ ಮತ್ತು ಒನ್ ವೆಬ್‌ನಂತಹ ಖಾಸಗಿ ಬಾಹ್ಯಾಕಾಶ ಕಂಪನಿಗಳು ಬಾಹ್ಯಾಕಾಶಕ್ಕೆ ಕಳುಹಿಸಿವೆ. ಭಾರತದ ಮಟ್ಟಿಗೆ ಹೇಳುವುದಾದರೆ ಬಾಹ್ಯಾಕಾಶ ಕ್ಷೇತ್ರವನ್ನು ಸರ್ಕಾರ ನಡೆಸುತ್ತಿದ್ದರೂ ಸಾಕಷ್ಟು ಪ್ರಗತಿಪರ ಸಂಶೋಧನೆಗಳು ನಡೆಯುತ್ತಿವೆ. ನಾವು ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಬಾಹ್ಯಾಕಾಶ ನೌಕೆಗಳನ್ನು ಕಳುಹಿಸುತ್ತಿದ್ದೇವೆ. ನಮಗೆ ಅಗತ್ಯವಿರುವ ಅನೇಕ ಉಪಗ್ರಹಗಳನ್ನ ಸ್ವತಃ ನಾವೇ ನಿರ್ಮಿಸಿಕೊಂಡಿದ್ದೇವೆ. ವಿದೇಶಿ ಹೂಡಿಕೆಯು ವಾಣಿಜ್ಯಿಕವಾಗಿ ಪ್ರಗತಿಯನ್ನು ಕಾಣುತ್ತಿದೆ ಎಂದು ನಾನು ನಂಬುತ್ತೇನೆ.
ಏರೋಪ್ಲೇನ್ಗಳು ಒಂದು ಕಾಲದಲ್ಲಿ ವಾಯುಪಡೆಗೆ ಮಾತ್ರವೇ ಸೀಮಿತವಾಗಿದ್ದವು. ಆದರೆ ಕಾಲಾನಂತರ ಸಾರ್ವಜನಿಕರು ಅವುಗಳನ್ನು ಬಳಸುವಂತಾಯಿತು. ಇದೀಗ ವಾಯುಯಾನ ಕ್ಷೇತ್ರ ಜನಪ್ರಿಯವಾಗಿದ್ದು, ಜೀವನದ ಅವಿಭಾಜ್ಯ ಅಂಗವಾಗುವತ್ತ ಮುನ್ನುಗ್ಗುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲೂ ಬಹುತೇಕ ಇದೇ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಬೇರೆ ದೇಶಗಳು ಇದರಲ್ಲಿ ಮುಂಚೂಣಿಯಲ್ಲಿದ್ದರೂ ಭಾರತ ಸಹ ಹಿಂದೇನೂ ಉಳಿದಿಲ್ಲ. ಇಲ್ಲೂ ಭಾರಿ ಬದಲಾವಣೆಗಳು ವೇಗವಾಗಿ ನಡೆಯುತ್ತಿವೆ. ಕೇವಲ ಸರ್ಕಾರದ ಒಡೆತನದಲ್ಲಿದ್ದ ಬಾಹ್ಯಾಕಾಶ ಉದ್ಯಮದಲ್ಲಿ ಈಗ ಖಾಸಗಿ ವಲಯವೂ ಹೂಡಿಕೆ ಮಾಡುತ್ತಿದೆ. ಸಂಶೋಧನೆಗಳು ಭರದಿಂದ ಸಾಗಿವೆ. ಬಾಹ್ಯಾಕಾಶಕ್ಕೆ ಒಮ್ಮೆ ಹೋಗಿ ಬರಬೇಕು ಎಂಬ ಆಸೆ ಜನಸಾಮಾನ್ಯರಲ್ಲೂ ಹುಟ್ಟಿಕೊಳ್ಳುತ್ತಿದೆ.
ವಿದೇಶಿ ಹೂಡಿಕೆ ವಿಷಯಕ್ಕೆ ಬಂದಾಗ, ಈ ಅವಕಾಶ ಕಲ್ಪಿಸಿಕೊಟ್ಟಿದ್ದರಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಆಗಲಿದೆ. ತಾಂತ್ರಿಕವಾಗಿ ಭಾರತೀಯರು ಹೆಚ್ಚು ಹೆಚ್ಚು ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು. ಈ ಉದ್ಯಮ ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗುತ್ತದೆ. ತಮಿಳುನಾಡಿನ ಕುಲಶೇಖರನ್ ಪಟ್ಟಿನಂನಲ್ಲಿ ಲಾಂಚ್ ಪ್ಯಾಡ್ ಸ್ಥಾಪನೆಯಾಗಲಿದೆ. ವಾಣಿಜ್ಯ ಹೂಡಿಕೆಗಳಿಗೆ ಅವಕಾಶ ಲಭಿಸಿದ್ದರಿಂದ ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತೀಯರು ಹೆಚ್ಚಿನ ಸಾಧನೆ, ಸಂಶೋಧನೆ, ಪ್ರಯೋಗಗಳನ್ನು ಮಾಡಲು ಅವಕಾಶ ಸಿಗಲಿದೆ. ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ಕಲ್ಪಿಸಿರುವುದರಿಂದ ಹೆಚ್ಚಿನ ಸಾಧನೆ ಮಾಡಲು ನೆರೆವು ನೀಡುವ ಸಾಧ್ಯತೆಗಳು ನಮ್ಮೆದುರಿಗೆ ತೆರದುಕೊಳ್ಳಲಿವೆ.
ಈ ಟಿವಿ ಭಾರತ: ಬಾಹ್ಯಾಕಾಶ ಪರಿಶೋಧನೆ ಕೇವಲ ವಿಜ್ಞಾನಕ್ಕೆ ಸೀಮಿತವಾಗಿಲ್ಲ. ರಕ್ಷಣಾ ಕ್ಷೇತ್ರದಲ್ಲೂ ಇದರ ಬಳಕೆ ಹೆಚ್ಚಲಿದೆ. ಇಂತಹ ಸನ್ನಿವೇಶದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲದೇ ವಿದೇಶಿ ಹೂಡಿಕೆಗೆ ಅನುಮತಿ ಸಿಗುತ್ತದೆ ಎಂದು ನೀವು ನಂಬುತ್ತೀರಾ?
ಡಾ. ಅಣ್ಣಾದೊರೈ: ಇದೊಂದು ಸವಾಲಿನ ಸಂಗತಿ. ಇದು ಬಹುತೇಕ ಸೆಲ್ ಫೋನ್‌ಗಳಂತೆಯೇ ಇದೆ. ಭದ್ರತೆ ಮತ್ತು ವೈಯಕ್ತಿಕ ಬಳಕೆಗೆ ಉಪಯುಕ್ತವಾಗಿದೆ. ಇದು ಇತ್ತೀಚೆಗೆ ಹೆಚ್ಚುತ್ತಿರುವ ಮತ್ತು ಸದ್ದು ಮಾಡುತ್ತಿರುವ ಡ್ರೋನ್‌ಗಳ ಕ್ಷೇತ್ರವನ್ನೂ ಸಹ ಒಳಗೊಂಡಿದೆ. ಈ ವಲಯವನ್ನು ಸರಕಾರ ನಿಯಂತ್ರಿಸುವ ಅವಶ್ಯಕತೆ ಖಂಡಿತಾ ಇದೆ. ಕಾರಣ ದೇಶದ ಭದ್ರತೆ ವಿಚಾರ ಪ್ರಮುಖವಾಗುತ್ತದೆ. ಸಾಕಷ್ಟು ಉತ್ಪಾದನೆಯ ಅಗತ್ಯವಿದ್ದಾಗ, ಹೊಸ ಹೊಸ ಉಪಕರಣಗಳು, ಪರಿಕರಗಳು ಹಾಗೂ ತಂತ್ರಜ್ಞಾನ ಬೇಕೇಬೇಕು. ಸೆಲ್ ಫೋನ್‌ಗಳು ಮತ್ತು ವಿಮಾನ ಪ್ರಯಾಣದಂತೆ ಅವುಗಳನ್ನು ಸರ್ಕಾರ ಯಶಸ್ವಿಯಾಗಿ ನಿಯಂತ್ರಿಸಬಹುದು ಎಂದು ನಾನು ಭಾವಿಸುತ್ತೇನೆ. ಪ್ರಸ್ತುತ ಯುಗದಲ್ಲಿ ಅಭಿವೃದ್ಧಿಯನ್ನ ಕೇವಲ ಸರ್ಕಾರದಿಂದ ಮಾತ್ರ ಮಾಡಲು ಸಾಧ್ಯವಿಲ್ಲ, ಖಾಸಗಿ ಕೊಡುಗೆಯೂ ಗಣನೀಯವಾಗಿ ಬೇಕಾಗುತ್ತದೆ. ಇದು ಇಂದಿನ ಅಗತ್ಯವೂ ಹೌದು ಎಂದು ನಾನು ಭಾವಿಸುತ್ತೇನೆ.
ಈ ಟಿವಿ ಭಾರತ: ಬಾಹ್ಯಾಕಾಶ ಕ್ಷೇತ್ರವು ಭಾರತದಲ್ಲಿ ಬೃಹತ್ ಹೂಡಿಕೆಗಳನ್ನು ಆಕರ್ಷಿಸುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲ ಈ ಕ್ಷೇತ್ರ ಯುವಕರಿಗೆ ಭಾರಿ ಪ್ರಮಾಣದಲ್ಲಿ ಕೆಲಸವನ್ನೂ ನೀಡಲಿದೆ. ಹಾಗಾದರೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಹುಡುಕಲು ವಿದ್ಯಾರ್ಥಿಗಳು ಏನೆಲ್ಲ ಮಾಡಬೇಕು. ಯಾವ ರೀತಿಯಲ್ಲಿ ಪ್ರಯೋಜನ ಪಡೆದುಕೊಳ್ಳಬೇಕು. ಯುವಕರು, ಆಸಕ್ತರು ತಮ್ಮ ವೃತ್ತಿಯನ್ನು ಪಡೆಯಲು ಹೇಗೆಲ್ಲ ಅಧ್ಯಯನ ಮಾಡಬೇಕು?
ಡಾ.ಅಣ್ಣಾದೊರೈ: ಬಿ.ಟೆಕ್ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಕಾರ್ಯಕ್ರಮಗಳಲ್ಲಿ ಅನೇಕ ಅವಕಾಶಗಳಿವೆ. ಸ್ನಾತಕೋತ್ತರ ಪದವಿಯಲ್ಲಿ ಏರೋನಾಟಿಕಲ್, ಏರೋ ಸ್ಪೇಸ್‌ನಂತಹ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ತಿರುವನಂತಪುರಂನಲ್ಲಿರುವ ಇಸ್ರೋದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಇದೆ. ಇಲ್ಲಿ ಅವರು ಅವಕಾಶ ಗಿಟ್ಟಿಸಿಕೊಂಡರೆ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ. ಕೋರ್ಸ್ ಮುಗಿದ ನಂತರ ನೀವು ಸರ್ಕಾರಿ ಅಥವಾ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಪಡೆಯಬಹುದು. ಅದರಲ್ಲಿ, ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ನಾಸಾ ಅಕಾಡೆಮಿಯಲ್ಲಿ ಅಧ್ಯಯನ ಮಾಡಲು ಅವಕಾಶಗಳನ್ನು ಸುಲಭವಾಗಿ ಪಡೆಯಬಹುದು.
ಈಟಿವಿ ಭಾರತ: ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗಗನಯಾನ ಯೋಜನೆ ಎಲ್ಲಿಗೆ ಬಂತು? ಮುಂದಿನ ಪ್ಲಾನ್ ಏನು?
ಡಾ.ಅಣ್ಣಾದೊರೈ: ಗಗನಯಾನ ಯೋಜನೆಯ ಕೊನೆಯ ಹಂತದಲ್ಲಿ ಕ್ರಯೋಜೆನಿಕ್ ಯಂತ್ರವನ್ನು ಬಳಸಬೇಕಿದೆ. ಇತ್ತೀಚಿನ ಚಂದ್ರಯಾನ-3 ಕಾರ್ಯಕ್ರಮದಲ್ಲಿಯೂ ಸಹ ಪರೀಕ್ಷಾರ್ಥ ಪ್ರಯೋಗಗಳು ಮುಂದುವರೆದಿವೆ. ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮುನ್ನ ಸಾಕಷ್ಟು ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಯೋಜನೆಗೆ ಯಾವುದೇ ಅಡೆತಡೆ ಬರದಂತೆ ನೋಡಿಕೊಳ್ಳಬೇಕಿದೆ.
ಇದನ್ನು ಓದಿ: ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್ ಭವಿಷ್ಯದ ಉದ್ಯೋಗ ಭರವಸೆಗಳು